ಮಂಡ್ಯ-ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ- ಬಿ.ಸಿ. ಶಿವಾನಂದ ಮೂರ್ತಿ


ಮಂಡ್ಯ:-
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೇ ಮಾಹೆಯಲ್ಲಿ ನಡೆಯಲಿರುವ ಎಲ್ಲಾ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರು ಸೂಚಿಸಿದರು.

ಇಂದು (ಏ.28) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೇ ಮಾಹೆಯಲ್ಲಿ ಬರಲಿರುವ ಶಂಕರಾಚಾರ್ಯ, ಭಗೀರಥ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಭಗವಾನ್ ಬುದ್ಧರ ಜಯಂತಿಯನ್ನು ವ್ಯವಸ್ಥಿತವಾಗಿ ಅಚರಿಸುವಂತೆ ಕಿವಿ ಮಾತು ಹೇಳಿದರು.

ಮೇ 2 ಶಂಕರಾಚಾರ್ಯರ ಜಯಂತಿ ಮತ್ತು ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಚರಿಸಲಾಗುವುದು, ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಹಾಗೂ ಸಮುದಾಯದಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮೇ 4 ರಂದು ಭಗೀರಥ ಜಯಂತಿಯನ್ನು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನೆಡೆಸಲು ತೀರ್ಮಾನಿಸಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿವಿಧ ಕಲಾತಂಡಗಳೊಂದಿಗೆ ಜಿಲ್ಲಾ ಪಂಚಾಯತ್ ವರೆಗೆ ಮೆರವಣಿಗೆ ನಡೆಸಲಾಗುವುದು, ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡಲಾಗುವುದು, ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಭಗೀರಥ ಜಯಂತಿಯನ್ನು ಆಚರಿಸುವಂತೆ ಸೂಚನೆ ನೀಡಲಾಗುವುದು ಎಂದರು.

ಕರ್ನಾಟಕ ಸರ್ಕಾರ ಪ್ರಥಮ ಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಗವಾನ್ ಬುದ್ಧರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಆದೇಶವನ್ನು ಹೊರಡಿಸಿರುವ ಹಿನ್ನಲೆ ನಮ್ಮ ಜಿಲ್ಲೆಯಲ್ಲೂ ಭಗವಾನ್ ಬುದ್ಧರ ಜಯಂತಿಯನ್ನು ನಗರದ ಡಾ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಭಗವಾನ್ ಬುದ್ಧರು ಎಲ್ಲಾ ಧರ್ಮಗಳಿಗೂ ಹಾಗೂ ಸಮುದಾಯಗಳಿಗೂ ಬೇಕಾದ ವ್ಯಕ್ತಿತ್ವ ಉಳ್ಳವರು, ಅವರ ವಿಚಾರ ನಿಲುವುಗಳು ಸಮಾಜಕ್ಕೆ ಪ್ರಸ್ತುತ, ಜಯಂತಿಯ ದಿನದಂದು ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಉದ್ಯಾನವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಬೋಧಿವೃಕ್ಷಕ್ಕೆ ನೀರಾಯಿಸಲಾಗುವುದು ಹಾಗೂ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳಿಂದ ವಿಶೇಷ ಉಪನ್ಯಾಸ ನಡೆಯಲಿದೆ, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.

“ಬುದ್ಧಂ ಶರಣಂ ಗಚ್ಛಾಮಿ” ಎಂಬ ಘೋಷ ವಾಕ್ಯ ಇರುವ ತೆರೆದ ರಥದ ಮೇಲೆ ಬುದ್ಧರ ಭಾವಚಿತ್ರವಿರಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಸಂಜಯ್ ವೃತ್ತ, 100 ಅಡಿ ರಸ್ತೆಯ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಮೆರವಣಿಗೆ ತಲುಪಲಿದೆ, ಸಾರ್ವಜನಿಕರು ಮುಕ್ತವಾಗಿ ಮೆರವಣಿಗೆಯಲ್ಲಿ ಭಾಗವಹಿಸಬಹುದು, ಮೆರವಣಿಗೆಯನ್ನು ಸುವ್ಯಾವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆಸಲಾಗುವುದು ಎಂದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಗರಸಭೆ ಪೌರಾಯುಕ್ತ ಪಂಪ ಶ್ರೀ, ಸಂಚಾರ ನಿರೀಕ್ಷಕರಾದ ಸಂತೋಷ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಪುಷ್ಪ, ಮುಖಂಡರುಗಳಾದ ವೆಂಕಟಗಿರಿಯಯ್ಯ, ಅಹಮದ್ ಪಾಷಾ, ಡಾ.ಶಿವರಾಜ್, ಡಾ.ವೆಂಕಟೇಶ್, ಸಿದ್ದಯ್ಯ, ನಾಗರಾಜು, ನಾಗರತ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?