ಮಂಡ್ಯ.- ಏಪ್ರಿಲ್ 24 ರಿಂದ ಮೇ 5 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ -2 ನಡೆಯಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಲೋಪಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ ಸೂಚನೆ ನೀಡಿದರು.
ಇಂದು (ಏ.23) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆ -2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ 8 ಕೇಂದ್ರಗಳಲ್ಲಿ 5325 ಪುನರಾವರ್ತಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮರುಪರೀಕ್ಷೆ ಬರೆಯುತ್ತಾರೆ, ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು ತಹಶೀಲ್ದಾರ್ ಬಿ.ಇ.ಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡಂತೆ ತ್ರಿ ಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಒಟ್ಟು ಆರು ಮಾರ್ಗಗಳ ಮೂಲಕ ಪ್ರಶ್ನ ಪತ್ರಿಕೆಯನ್ನು ಸಾಗಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಉತ್ತಮ ಮೂಲ ಸೌಕರ್ಯಗಳಾದ ಪೀಠೋಪಕರಣಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ, ಪ್ರತಿ ಕೇಂದ್ರಕ್ಕೂ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ, ಪರೀಕ್ಷಾ ಕೇಂದ್ರಗಳಲ್ಲಿ ಸುಸರ್ಜಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀ. ಸುತ್ತ ಮುತ್ತಲಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿ ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆದಂತೆ ಕ್ರಮ ವಹಿಸಲಾಗುವುದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್ಲೈನ್ ಲಾಗಿನ್ ಪೋರ್ಟಲ್ ಮೂಲಕ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಶಸ್ತ್ರಾಸ್ತ್ರ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ, ಪರೀಕ್ಷಾ ದಿನಗಳಂದು ಪ್ರಶ್ನೆಪತ್ರಿಕೆ ವಿತರಕರ ತಂಡಗಳೊಂದಿಗೆ ಶಸ್ತ್ರಾಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಿಸಿಟಿವಿ ಕಣ್ಗಾವಲು
ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದ್ದು, ಸಿಸಿಟಿವಿ ವೆಬ್ ಕಾಸ್ಟಿಂಗ್ ವೀಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ, ಎಲ್ಲಾ ಸಿಸಿಟಿವಿಯ ವೆಬ್ ಕಾಸ್ಟಿಂಗ್ ಅನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಕ್ಷೀಸಲಾಗುತ್ತಿರುತ್ತದೆ, ಮೇಲ್ವಿಚಾರಕರು ಎಚ್ಚರಿಕೆಯಿಂದ ಪರೀಕ್ಷೆಯನ್ನು ನಡೆಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾ ಖಜಾನೆಯ ಮುಖ್ಯ ಲೆಕ್ಕಿಗ ಜಿ.ಜೆ ಬಸವಣ್ಣ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಕೆ.ಆರ್. ಪೇಟೆ ತಹಶೀಲ್ದಾರ್ ಗ್ರೇಡ್ -2 ಬಿ ಆರ್ ಲೋಕೇಶ್. ನಗರಸಭೆ ಪರಿಸರ ಅಭ್ಯಂತರ ರುದ್ರೇಗೌಡ, ಶಿರಸ್ತೆದಾರ್ ಚಂದ್ರಶೇಖರ್, ವಿವಿಧ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.