ಮಂಡ್ಯ- ಶಾಸಕ ಪಿ.ರವಿಕುಮಾರ್‌ಗೌಡರ ನೇತೃತ್ವದಲ್ಲಿ ಬಸವಣ್ಣನವರ ಪುತ್ಥಳಿ- ಭವನ ನಿರ್ಮಾಣ – ಸಚಿವ ಚಲುವರಾಯಸ್ವಾಮಿ ಭರವಸೆ

ಮಂಡ್ಯ : ಸಮಸಮಾಜ ಪರಿಕಲ್ಪನೆಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಪುತ್ಥಳಿ ಹಾಗೂ ಬಸವಭವನ ನಿರ್ಮಾಣವನ್ನು ಶಾಸಕರಾದ ಪಿ.ರವಿಕುಮಾರ್‌ಗೌಡರ ನೇತೃತ್ವದಲ್ಲಿ ಶೀಘ್ರವೇ ಮಾಡಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ನಗರದ ಕಲಾಮಂದಿರದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣನವರ 892ನೇ ಜನ್ಮದಿನಾಚರಣೆಯಲ್ಲಿ ವಿವಿಧ ಬಸವಾಭಿಮಾನಿಗಳ ಸಂಘಟನೆಯ ಮುಖಂಡರು ನೀಡಿದ ಮನವಿಗೆ ಸ್ಪಂದಿಸಿದ ಸಚಿವರು, ಬಸವಣ್ಣನವರ ಆದರ್ಶಗಳು ಎಂದೆಂದಿಗೂ ಅಜರಾಮರವಾಗಿ ಉಳಿಯುವಂತಹವು. ಇಂತಹ ಮಹಾನ್ ದಾರ್ಶನಿಕ ಪುರುಷರನ್ನು ನಿತ್ಯವೂ ಸ್ಮರಿಸುವ ಸಲುವಾಗಿ ಮಂಡ್ಯದಲ್ಲಿ ಪುತ್ಥಳಿ ಹಾಗೂ ಬಸವಭವನ ಎರಡನ್ನೂ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸರಿಸುಮಾರು ಮೂರು ಲಕ್ಷಮಂದಿ ಲಿಂಗಾಯತ ಸಮುದಾಯವಿದ್ದು ಕಳೆದ ಹಲವಾರು ವರ್ಷಗಳಿಂದ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಸಬೇಕೆಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಮನವಿ ನೀಡಿದರು. ಮಂಡ್ಯ ಜಿಲ್ಲೆಯಲ್ಲಿ ಬಸವ ಭವನ ಹಾಗೂ ಡಿಸಿ ಕಚೇರಿ ಮುಂದೆ ಬಸವಣ್ಣನವರ ಅಶ್ವರೂಢ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತ ಕ್ರಮ ಕೈಗೊಂಡು ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಜಿಲ್ಲೆಯ ವಿವಿಧ ಬಸವಾಭಿಮಾನಿಗಳ ಸಂಘಟನೆಯ ಮುಖಂಡರು ಸಹಿ ಮಾಡಿರುವ ಮನವಿ ಪತ್ರವನ್ನು ಸಚಿವರಿಗೆ ನೀಡಲಾಯಿತು.  

ಈ ವೇಳೆ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮುಖಂಡರಾದ ಸುಂಡಹಳ್ಳಿ ಸೋಮಶೇಖರ್, ವಕೀಲ ಎಂ.ಗುರುಪ್ರಸಾದ್, ರಾಜಶೇಖರ್, ಆನಂದ್, ಜಿ.ಮಹಾಂತಪ್ಪ, ಮೆಣಸಗೆರೆ ಶಿವಲಿಂಗಯ್ಯ ಮತ್ತಿತರರು ಸಚಿವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *

× How can I help you?