ಮಂಡ್ಯ- ಕೆರೆ-ಕಟ್ಟೆಗಳನ್ನು-ಯಾರೂ-ಅತಿಕ್ರಮಣ-ಮಾಡದಂತೆ-ನಿಗಾ-ವಹಿಸಿ- ಜಿಲ್ಲಾ-ಉಸ್ತುವಾರಿ-ಕಾರ್ಯದರ್ಶಿಗಳಾದ-ವಿ. ಅನ್ಬುಕುಮಾರ್

ಮಂಡ್ಯ: ಜಿಲ್ಲೆಯಲ್ಲಿರುವ ಯಾವುದೇ ಕೆರೆಕಟ್ಟೆಗಳನ್ನು ಯಾರೂ ಅತಿಕ್ರಮಣ ಮಾಡದಂತೆ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ಅನ್ಬುಕುಮಾರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು (ಮಾ.29) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಕೆ. ಡಿ. ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಪ್ರಸ್ತುತ 106 ಅಡಿ ನೀರು ಸಂಗ್ರಹವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 968 ಕೆರೆಗಳಿದ್ದು ಅದರಲ್ಲಿ 232 ಕೆರೆಗಳು ಶೇ 100 ರಷ್ಟು ಪ್ರಮಾಣದಲ್ಲಿ ನೀರು ಭರ್ತಿಯಾಗಿವೆ, 168 ಕೆರೆಗಳು ಶೇ 75 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ, ಕೆರೆ ಕಟ್ಟೆಗಳಿಗೆ ನೀರು ಪೂರೈಕೆ ಆಗದಂತೆ ಯಾರಾದರೂ ಅಡ್ಡಗಟ್ಟಿದ್ದರೆ ಅಂತಹವರನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ ಅಂತಹ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು 160 ಖಾಸಗಿ ಕೊಳವೆ ಬಾವಿಗಳನ್ನು ಖರೀದಿಸಲಾಗಿದೆ, ಇನ್ನೂ 124 ಗ್ರಾಮಗಳಲ್ಲಿ ಕೊಳವೆಬಾವಿಯನ್ನು ಕೊರೆಯಲು ಸೂಕ್ತ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಗಿಡ ಮರಗಳನ್ನು ಬೆಳೆಸಿ ಬೇಸಿಗೆ ಸಂದರ್ಭದಲ್ಲಿ ಅನುಕೂಲವಾಗುತ್ತದೆ, ಗಿಡ ನೇಡುವ ಸಂದರ್ಭದಲ್ಲಿ 2-3 ಅಡಿ ಗುಂಡಿ ತೆಗೆದು ಗಿಡ ನೆಟ್ಟರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ, ಉತ್ತಮ ಪರಿಸರಕ್ಕೆ ಅಗತ್ಯವಿರುವ ಹಾಗೂ ವನ್ಯಜೀವಿಗಳಿಗೆ ಅನುಕೂಲವಾಗುವಂತಹ ಗಿಡ ಮರಗಳನ್ನು ಬೆಳೆಸಿ, ಪ್ರಸ್ತುತ ಇರುವ ಗಿಡ ಮರಗಳನ್ನು ಉಳಿಸಿ ಇದು ಅತಿ ಮುಖ್ಯವಾದ ಕೆಲಸ ಎಂದು ಹೇಳಿದರು.

ಜಿಲ್ಲೆಯ ಸರ್ಕಾರಿ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಿತ್ತಿರುವುದು ಗಮನಕ್ಕೆ ಬಂದಿದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಬಸ್ಸುಗಳಿಗೆ ಟೋಲ್ ಗಳಲ್ಲಿ ವಿನಾಯಿತಿ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಿ ಎಂದರು.

ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮವಹಿಸಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ ಭೂ ಸುರಕ್ಷಾ ಯೋಜನೆಯಡಿ ಎಲ್ಲಾ ಕಂದಾಯ ದಾಖಲೆಗಳನ್ನು ಡಿಜೀಟಲೀಕರಣ ಮಾಡಲಾಗುತ್ತಿದೆ, ಪ್ರತಿ ದಿನಕ್ಕೆ 1000 ಭೂ ದಾಖಲೆ ಹಾಳೆಗಳನ್ನು ಸ್ಕ್ಯಾನ್ ಮಾಡಿ ಆಪ್ ಲೋಡ್ ಮಾಡಲಾಗುತ್ತಿದೆ, ಸದರಿ ವರ್ಷದಲ್ಲಿ 53 ಲಕ್ಷ ಹಾಳೆಗಳನ್ನು ಸ್ಕ್ಯಾನ್ ಮಾಡಿ ಆಪ್ ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ರೈತ ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸಿ ಪರಿಹಾರ ಧನ ನೀಡಲಾಗಿದೆ, ಜಿಲ್ಲೆಯ ಎಲ್ಲಾ ಕರೆಗಳ ಸರ್ವೆ ನಡೆಸಿ ಕೆರೆಯ ಸುತ್ತಳತೆಯನ್ನು ಗುರುತಿಸಲಾಗಿದೆ, ಸಂಬಂಧಪಟ್ಟ ಇಲಾಖೆಯವರು ಯಾವುದೇ ಕಾರಣಕ್ಕೂ ಒತ್ತುವರಿ ಆಗದಂತೆ ನೋಡಿಕೊಳ್ಳಿ, ಸಾರ್ವಜನಿಕರ ಅನುಕೂಲಕ್ಕಾಗಿ ಅನಕೆರೆ ಮತ್ತು ಗೌಡಹಳ್ಳಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಶಿವಾನಂದ ಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ ಮೋಹನ್. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರಿ ಕೆ.ಎನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?