ಮಂಡ್ಯ-ವಿದ್ಯಾರ್ಥಿಗಳು ಫುಟ್ಬಾಲ್‌ ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋಷಕರು ಹಾಗು ದೈಹಿಕ ಶಿಕ್ಷಕರು ಪ್ರೋತ್ಸಾಹ ನೀಡಬೇಕು-ವಸಂತ್‌ ಕುಮಾರ್‌ ಸಲಹೆ

ಮಂಡ್ಯ:ವಿದ್ಯಾರ್ಥಿಗಳು ಫುಟ್ಬಾಲ್‌ ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋಷಕರು ಹಾಗು ದೈಹಿಕ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಬಿಜೆಪಿ ಜಿಲ್ಲಾ ನಗರ ಘಟಕದ ಅಧ್ಯಕ್ಷ ವಸಂತ್‌ ಕುಮಾರ್‌ ಸಲಹೆ ನೀಡಿದರು.

ನಗರದ ಬಿ.ಜಿ.ದಾಸೇಗೌಡ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಕ್ರೀಡಾ ಇಲಾಖೆ, ಸ್ವರ್ಣ ಫುಟ್ಬಾಲ್‌ ಅಭಿವೃದ್ಧಿ ಸಂಸ್ಥೆ ಹಾಗು ಜಿಲ್ಲಾ ಫುಟ್ಬಾಲ್‌ ಅಸೋಸಿಯೇಷನ್‌ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ 5–ಎಸ್‌ ಫುಟ್ಬಾಲ್‌ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಮತ್ತು ಯುವ ಜನಾಂಗ ಕ್ರಿಕೆಟ್ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಫುಟ್ ಬಾಲ್ ಸಹ ಕ್ರಿಕೆಟ್ ನಷ್ಟೇ ಪ್ರಸಿದ್ದಿ ಹೊಂದಿದ ಕ್ರೀಡೆಯಾಗಿ ವಿಶ್ವದಾದ್ಯಂತ ಪಸರಿಸಿದೆ.ಪೋಷಕರು ಹಾಗು ಶಾಲೆಗಳಲ್ಲಿನ ದೈಹಿಕ ಶಿಕ್ಷಕರು ಮಕ್ಕಳಲ್ಲಿ ಫುಟ್ ಬಾಲ್ ಬಗೆಗೂ ಆಸಕ್ತಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದರು.

ಈ ಫುಟ್ಬಾಲ್‌ ಪಂದ್ಯಗಳಲ್ಲಿ ಪ್ರಶಸ್ತಿಗಾಗಿ ನಡೆದ ಕೊನೆಯ ಕಾಳಗ ಪ್ರೇಕ್ಷಕರಿಗೆ ಸಂತಸ ನೀಡಿದೆ. ಎರಡೂ ತಂಡಗಳು ಸಮಬಲ ಹೋರಾಟದಲ್ಲಿ ನಿರತರಾಗಿ ಅದನ್ನು ಕೊನೆವರೆಗೂ ಉಳಿಸಿಕೊಂಡು ಹೋಗಿದ್ದು ವಿಶೇಷವಾಗಿತ್ತು.ಇಂತಹ ಆಸಕ್ತಿದಾಯಕ ಆಟಗಳು ಗ್ರಾಮೀಣ ಭಾಗದಲ್ಲಿಯೂ ನಡೆಯಬೇಕು ಎಂದು ತಿಳಿಸಿದರು.

ಮಂಡ್ಯದ ನೇತಾಜಿ ಫುಟ್ಬಾಲ್‌ ತಂಡವು ಪ್ರಥಮ ಬಹುಮಾನ ಗಳಿಸಿದರೆ ಮೈಸೂರಿನ ವೀನಸ್‌ ಫುಟ್ಬಾಲ್‌ ತಂಡವು ದ್ವಿತೀಯ ಬಹುಮಾನ ಗಳಿಸಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್‌, ಫುಟ್ಬಾಲ್‌ ಮಾಜಿ ಆಟಗಾರರಾದ ಆಟೋ ನಾಗರಾಜ್, ವೆಂಕಟ್‌, ವೇಣುಗೋಪಾಲ್‌, ಮುಖಂಡರಾದ ಕೃಷ್ಣಪ್ಪ, ನಟರಾಜು, ರವಿಚಂದ್ರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?