ಮಂಡ್ಯ:ತಾಲ್ಲೂಕಿನ ಹೊಳಲು ಗ್ರಾಮದ ಶ್ರೀ ಚಿತ್ತಾನಹಳ್ಳಿ ಪಟ್ಟಲದಮ್ಮ ದೇವಾಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅರಳಿಕಟ್ಟೆ ಮತ್ತು ನಾಗರಕಟ್ಟೆ ರಾಜಗೋಪುರ ಹಾಗೂ 52 ದೇವತೆಗಳ ಶಕ್ತಿಪೀಠ, ಸುಖನಾಶಿ, ಬಲಿಪೀಠ, ಗುರುಡಕಂಬ, ದೀಪಕಂಬ, ಅಮ್ಮನವರ ಪಾದುಕೆ, ಕಂಚಿನತ್ರಿಶೂಲ, ಮಹಾದ್ವಾರ, ಕಲ್ಲಿನ ಜೋಡಿ, ಆನೆಗಳ ಪ್ರತಿಮೆ, ವಿಮಾನ ಗೋಪುರದ ಕಳಸ ಪ್ರತಿಷ್ಠಾಪನಾ ಉದ್ಘಾಟನಾ ಸಮಾರಂಭವು ಸಂಭ್ರಮ ಸಡಗರದಿಂದ ನಡೆಯಿತು.
ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇವರಲ್ಲಿ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರೆ ನಂಬಿಕೆ ಸಾಕಾರಗೊಳ್ಳುವುದು,ಮನಸ್ಸು ಪರಮಾತ್ಮನ ಕಡೆಯಿದ್ದಲ್ಲಿ ಈ ಬದುಕು ಹಸನಾಗಿರುತ್ತದೆ. ಆಧ್ಯಾತ್ಮ ಧರ್ಮದ ಭಾವನೆಯನ್ನು ಬೆಳೆಸಿಕೊಂಡಲ್ಲಿ ಸಾಕ್ಷಾತ್ಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿಜ್ಞಾನ ಬೆಳೆದೆಂತೆಲ್ಲಾ ದೇವಾಲಯಗಳು ಮತ್ತು ದೇವರಲ್ಲಿನ ನಂಬಿಕೆ ಹೆಚ್ಚುತ್ತಿರುವುದು ವಿಶೇಷವಾಗಿದೆ. ಕುಟುಂಬದಲ್ಲಿ ಕಷ್ಟಗಳು ಸಾಮಾನ್ಯವಾಗಿದೆ ಇದರ ಪರಿಹಾರಕ್ಕಾಗಿ ದೇವರನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂಬುದನ್ನು ನಮ್ಮ ಹಿರಿಯರ ನಂಬಿಕೆಯಾಗಿತ್ತು. ಅದರಂತೆ ಜಂಜಾಟದಲ್ಲಿ ಜೀವನದಲ್ಲಿ ದೇವರ ಪ್ರಾರ್ಥನೆಯು ಮುಖ್ಯವಾಗಬೇಕಿದೆ ಎಂದು ತಿಳಿಸಿದರು.
ಮಾಜಿ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಹೊಳಲು ಗ್ರಾಮವನ್ನು ಅಂಬರೀಷ್ ಅವರು ಇಷ್ಟ ಪಡುತ್ತಿದ್ದರು.ಅಂಬರೀಷ್ ಅವರಿಗೆ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ ಗ್ರಾಮವೂ ಇದಾಗಿದೆ. ಅದರಂತೆ ಈ ಗ್ರಾಮಕ್ಕೆ ಹಲವು ಅನುದಾನಗಳನ್ನು ನೀಡಿದ್ದಾರೆ, ಅದರಂತೆ ನಾನು ಸಹ ಅನುದಾನ ನೀಡಿರುವೆ ಎಂದರು.
ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ಅವರು ದೇವರ ದರ್ಶನ ಪಡೆದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಅಪೆಕ್ಸ್ ಬ್ಯಾಂಕ್ ಸದಸ್ಯ ಅಶ್ವಥ್, ಚಿತ್ತಾನಹಳ್ಳಿ ದೇವಾಲಯದ ಗೌರವಾಧ್ಯಕ್ಷ ಎಚ್.ಎಲ್.ಶಿವಣ್ಣ, ಅಧ್ಯಕ್ಷ ಎಚ್.ಬಿ.ರಾಮು ಭಾಗವಹಿಸಿದ್ದರು.