ಮಂಡ್ಯ ಜಿಲ್ಲೆಯು ರಾಜ್ಯದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರ ಜೊತೆಯಲ್ಲಿ ತನ್ನದೇ ಆದ ವಿಶಿಷ್ಟತೆಗೆ ವಿಶ್ವದಲ್ಲೇ ಗುರುತಿಸಿಕೊಂಡಿದೆ.ಸಾಹಿತ್ಯ ಮತ್ತು ಸಾಂಸ್ಕೃತಿಯಲ್ಲಿ ಮಂಡ್ಯ ಜಿಲ್ಲೆಯು ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.ಸಾಹಿತ್ಯ ವಿಷಯಕ್ಕೆ ಬಂದರೆ ಕನ್ನಡದ ಕಣ್ಮಣಿ ಬಿ.ಎಂ.ಶ್ರೀಕಂಠಯ್ಯ, ಮೂರ್ತಿರಾಯರು,ಪುತಿನ, ಕೆ.ಎಸ್.ನರಸಿಂಹಸ್ವಾಮಿ, ಬೆಸಗರಹಳ್ಳಿ ರಾಮಣ್ಣ, ಅ.ರಾ.ಮಿತ್ರ, ಸುಜನಾ, ಜಯಪ್ರಕಾಶ್ ಗೌಡ, ರಂಗಕರ್ಮಿ ಶಶಿಧರ್ ಭರಿಘಾಟ್, ಲತಾ ರಾಜಶೇಖರ್, ನರಹರಿ ಬಾಲಸುಬ್ರಹ್ಮಣ್ಯ ಸೇರಿದಂತೆ ಅನೇಕ ಸಾಹಿತಿಗಳ ಕೊಡುಗೆ ಜಿಲ್ಲೆ ಅಪಾರವಾಗಿದೆ.
ನಮ್ಮ ಮಂಡ್ಯ ಜಿಲ್ಲೆಯಲ್ಲಿ ಮೊನ್ನೆ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ಈವರೆಗೆ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಮೊದಲ ಬಾರಿಗೆ 48ನೇ ಸಮ್ಮೇಳನವು 1971ರಲ್ಲಿ ಜಯದೇವಿತಾಯಿ ಲಿಗಾಡೆಯವರ, 63ನೇ ಸಮ್ಮೇಳನವು 1994ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ಹಾಗೂ ಈಗ 87ನೇ ಸಮ್ಮೇಳನವು 2024 ರಲ್ಲಿ ನಾಡೋಜ ಗೊ. ರು. ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೇ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯ ನಗರದ ಹೊರವಲಯದಲ್ಲಿರುವ ಸೆನ್ ಜೋಸೆಫ್ ಆಸ್ಪತ್ರೆಯ ಹಿಂಬದಿಯಲ್ಲಿ ರೈತರ ಜಮೀನನ್ನು ಸಮತಟ್ಟಾಗಿ ಮಾಡಿ ಬೃಹತ್ ವೇದಿಕೆ ಒಂದನ್ನು ನಿರ್ಮಾಣ ಮಾಡಿದ್ದರು. ಈ ವೇದಿಕೆ ನಿರ್ಮಾಣ ಮಾಡಲು ಅನೇಕ ಸಭೆಗಳನ್ನು ಮಂಡ್ಯ ಜಿಲ್ಲೆಯಲ್ಲಿ ನಡೆಸಿದರು. ಈ ವೇದಿಕೆ ಸಮ್ಮೇಳನಕ್ಕೆ ಮಾತ್ರ ಸೂಕ್ತವಾಗಿತ್ತು ಸರಿಯಾದ ಶೌಚಾಲಯದ ವ್ಯವಸ್ಥೆ ಮತ್ತು ಕುಡಿವ ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಿರಲಿಲ್ಲ. ಸಾರ್ವಜನಿಕ ಶೌಚಾಲಯ ಗಣ್ಯ ವ್ಯಕ್ತಿಗಳ ಶೌಚಾಲಯಕ್ಕಿಂತ ಉತ್ತಮವಾಗಿತ್ತು. ಸರಿಸುಮಾರು ಮೂವತ್ತು ವರ್ಷಗಳ ನಂತರ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಜನಗಳು ಜಾತ್ರೆಯಲ್ಲಿ ಸೇರುವ ಹಾಗೆ ಸೇರಿದರು. ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಅಭಿರುಚಿ ಇರುವ ಮನಸುಗಳ ಜೊತೆಗೆ ಕನ್ನಡ ಮನಸುಗಳು ಇದ್ದರು. ಸಂಘಟಕರು ಸರಿಸುಮಾರು 10 ಲಕ್ಷ ಕನ್ನಡ ಮನಸುಗಳು ಸೇರಿದ್ದರು ಎಂಬ ಮಾಹಿತಿಯನ್ನು ಪತ್ರಿಕೆಗಳಿಗೆ ನೀಡಿದ್ದಾರೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನಕ್ಕಿಂತ ಕನ್ನಡ ಜಾತ್ರೆ ನಡೆದಿದೆ ಎಂಬುದನ್ನು ಹೇಳಬಹುದು. ಉದ್ಘಾಟನಾ ಕಾರ್ಯಕ್ರಮ ಬಿಟ್ಟರೆ ಯಾವುದೇ ಗೋಷ್ಠಿಯಲ್ಲಿ ಜನರು ಇರಲಿಲ್ಲ. ಎಲ್ಲರೂ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ಮತ್ತು ವೈವಾಟು ನಡೆಸುವುದರಲ್ಲಿ ನಿರತರಾಗಿದ್ದರು.
ಮಂಡ್ಯ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರವು ಸುಮಾರು 30 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಇದರ ಜೊತೆಯಲ್ಲಿ ಸಾಹಿತ್ಯ ಅಭಿಮಾನಿಗಳು ಮತ್ತು ಹೊರದೇಶದಲ್ಲಿ ನೆಲೆಸಿರುವ ಕನ್ನಡ ಮನಸುಗಳು ಹಣವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಮೇಲ್ಮಟ್ಟಕ್ಕೆ ನೋಡಿದರೆ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕಿಂತ ಕನ್ನಡ ಜಾತ್ರೆ ನಡೆದಿದೆ ಎಂದು ಹೇಳಬಹುದು.
ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾಡಳಿತ ಸೇರಿ ಮೂರು ದಿನಕ್ಕೆ ಸುಂದರವಾದ ಊಟದ ಮೆನು ಸಿದ್ದಪಡಿಸಿ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿತ್ತು. ಆದರೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದ ಮೆನುವಿನ ರೀತಿಯಲ್ಲಿ ಯಾವುದೇ ಊಟ ಇರಲಿಲ್ಲ. ಹತ್ತು ನಿಮಿಷ ತಡವಾಗಿ ಹೋದರೆ ಸರಿಯಾದ ಊಟವೂ ಕೂಡ ಸಿಗುತ್ತಿರಲಿಲ್ಲ. ಇನ್ನು ತಿಂಡಿ ವಿಷಯಕ್ಕೆ ಹೋದರೆ ಮೊದಲನೇ ದಿನ ನೀಡಿದ ಇಡ್ಲಿ ಅನೇಕರಿಗೆ ಸಿಗಲಿಲ್ಲ. ಮುಂಚೆ ಹೋದವರೆಗೂ ಒಂದು ಇಡ್ಲಿ ಬಿಟ್ಟರೆ ಹೆಚ್ಚಿನ ರೀತಿಯಲ್ಲಿ ಸಿಗುತ್ತಿರಲಿಲ್ಲ. ಬಡಿಸುವವರನ್ನು ಕೇಳಿದರೆ ನಮಗೆ ಒಂದೇ ನೀಡಿ ಎಂದು ಮಾರ್ಗದರ್ಶನ ಮಾಡಿದ್ದಾರೆ ಆ ಕಾರಣಕ್ಕೆ ಎಂಬ ಉತ್ತರವು ಸಿಗುತ್ತಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೂ ಸ್ವಲ್ಪ ನೂಕು ನುಗ್ಗಾಟ ಸೇರಿ ಹೊಟ್ಟೆ ತುಂಬಾ ಊಟ ಸಿಗದ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಊಟದಲ್ಲಿ ಉದ್ದನೆಯ ಕ್ಯೂ, ತಳ್ಳಾಟ, ಧೂಳು ಬಿಟ್ಟರೆ ರುಚಿಯಾದ ಊಟ ಇರಲಿಲ್ಲ. ಮೆನುನಲ್ಲಿದ್ದ ಊಟ ಸುಮಾರು ಶೇಕಡ 60% ರಷ್ಟು ಜನರಿಗೆ ಸಿಗಲಿಲ್ಲ. ಊಟದಲ್ಲಿನ ಅವ್ಯವಸ್ಥೆ ಎಲ್ಲರಿಗೂ ಎದ್ದು ಕಾಣುತ್ತಿತ್ತು.
ಖಾಲಿ ಕುರ್ಚಿಗಳಿಗೆ ಗೋಷ್ಠಿಯ ರುಚಿ:-
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಜಿಲ್ಲೆಯ ಸಮಗ್ರ ಮಾಹಿತಿ ಕುರಿತು ಅನೇಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು. ಗೋಷ್ಠಿಯಲ್ಲಿ ಖಾಲಿ ಕುರ್ಚಿಗಳು ಬಿಟ್ಟರೆ ಯಾವುದೇ ರೀತಿ ಕೇಳುವ ಮನಸುಗಳು ಇರಲಿಲ್ಲ. ಅಲ್ಲೊಂದು ಇಲ್ಲೊಂದು ಕುರ್ಚಿಗಳಲ್ಲಿ ವ್ಯಕ್ತಿಗಳು ಕುಳಿತಿದ್ದರು ಅವರು ಫೋನ್ ಮತ್ತು ಪತ್ರಿಕೆ ಹಿಡಿದು ಕುಳಿತಿದ್ದರೂ ಹೊರೆತು ಯಾರು ಮನಕೊಟ್ಟು ಕೇಳುತ್ತಿರಲಿಲ್ಲ. ಸಮ್ಮೇಳನ ಉದ್ಘಾಟನೆಯ ಸಮಯದಲ್ಲಿ ರಾಜಕೀಯ ವ್ಯಕ್ತಿಗಳು ಬಂದ ಸಂದರ್ಭದಲ್ಲಿ ಸೇರಿದ್ದ ಜನರು ಬಿಟ್ಟರೆ ಇನ್ನು ಯಾವ ಗೋಷ್ಟಿಯಲ್ಲೂ ಜನರು ಕಾಣಲಿಲ್ಲ. ಇನ್ನು ಮೂರು ಕವಿಗೋಷ್ಠಿ ನಡೆದವು. ವೇದಿಕೆ ಮೇಲೆ ಕವಿಗಳು ಕುಳಿತುಕೊಳ್ಳಲು ಮುಂದಿನ ಸಾಲೆ ಬೇಕಾಗಿರುವುದರಿಂದ ಹಂತ ಹಂತವಾಗಿ ಕವಿಗೋಷ್ಠಿಯೂ ನಡೆಯಿತು. ಈ ಕವಿಗೋಷ್ಠಿಗಳನ್ನು ಕೇಳುವ ಮನಸ್ಸುಗಳು ಯಾರು ಇರಲಿಲ್ಲ ಕವಿಗಳು ಖಾಲಿ ಕುರ್ಚಿಗಳಿಗೆ ಕವಿತೆಗಳನ್ನು ವಾಚನ ಮಾಡಿದರು.
ಸಮ್ಮೇಳನದ ಉದ್ಘಾಟನಾ ಸಮಯ, ಸಂಗೀತ ನಿರ್ದೇಶಕರ ಸಂಗೀತ ಕಾರ್ಯಕ್ರಮ, ಸಮಾರೋಪ ಸನ್ಮಾನ ಸಂದರ್ಭದಲ್ಲಿ ಹೊರತುಪಡಿಸಿದರೆ ಇನ್ನು ಯಾವುದೇ ಗೋಷ್ಠಿಗಳಲ್ಲಿ ಕೇಳುವ ಮನಸ್ಸುಗಳು ಇರಲಿಲ.
ಪುಸ್ತಕ ಮಳಿಗೆಯಲ್ಲಿ ಜನಸಾಗರ:- ಈ ಬಾರಿ ಸಾಹಿತ್ಯ ಸಮ್ಮೇಳನ ನೋಡಲು ಜನಸಾಗರವೇ ಹರಿದು ಬಂದಿತ್ತು. ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಒಂದು ಮಳೆಗೆಗೆ ಮೂರು ಸಾವಿರ ರೂ ಹಣಗಳನ್ನು ನಿಗದಿಪಡಿಸಿತ್ತು. ಈ ಬಾರಿ ಸರಿಸುಮಾರು 250ಕ್ಕೂ ಹೆಚ್ಚಿನ ಪುಸ್ತಕ ಮಳಿಗೆಗಳು ಭಾಗವಹಿಸಿದ್ದವು. ಜಾತ್ರೆಯ ರೀತಿಯಲ್ಲಿ ಜನ ಸಾಗರವು ಪ್ರತಿ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದರು. ಎಲ್ಲರೂ ಪುಸ್ತಕದ ಮುಖಪುಟ ಮತ್ತು ಬೆಲೆ ನೋಡಿ ಯಾವ ರೀತಿ ಎತ್ತಿಕೊಂಡಿದ್ದರು ಅದೇ ರೀತಿಯಲ್ಲಿ ಇಟ್ಟು ಹೋಗುತ್ತಿದ್ದರು. ಸಮ್ಮೇಳನಕ್ಕೆ ಬಂದ ಪ್ರತಿಯೊಬ್ಬರು ಕನಿಷ್ಠ ಒಂದು ಪುಸ್ತಕ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಈ ಬಾರಿ ಸರಿಸುಮಾರು ಹತ್ತು ಲಕ್ಷ ಪುಸ್ತಕಗಳು ವ್ಯಾಪಾರವಾಗುತ್ತಿದ್ದವು. ಜೊತೆಯಲ್ಲಿ ಭಾಗವಹಿಸಿದ ಪ್ರಕಾಶಕರಿಗೂ ಕೊಂಚ ಆದಾಯವಾಗುತ್ತಿತ್ತು. ಪುಸ್ತಕ ಖರೀದಿ ಮಾಡಲು ಬಂದಿದ್ದ ಜನಸಾಗರಕ್ಕಿಂತ ನೋಡಿದರೆ ಹೆಚ್ಚಾಗಿದ್ದರು ಅಂದುಕೊಂಡ ರೀತಿಯಲ್ಲಿ ಪುಸ್ತಕಗಳು ವ್ಯಾಪಾರವಾಗಲಿಲ್ಲ. ಪುಸ್ತಕ ಮಳಿಗೆಗಳಿಂದ ಸಾಹಿತ್ಯವು ಮನೆಮನೆಗೆ ತಲುಪುತ್ತದೆ ಪುಸ್ತಕದ ಮಹತ್ವ ಎಲ್ಲರಿಗೂ ತಿಳಿಸುತ್ತೇವೆ ಎಂಬ ಹೇಳಿಕೆಯು ವಿಫಲವಾಯಿತು.
ಸಮ್ಮೇಳನದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ:- ಮಂಡ್ಯ ಜಿಲ್ಲೆಯು ಹೆಚ್ಚಾಗಿ ಕನ್ನಡ ಮಾತನಾಡುವ ಜಿಲ್ಲೆಯ ಜೊತೆಯಲ್ಲಿ ಸಾಹಿತ್ಯದಲ್ಲೂ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಅನೇಕರು ಸಾಹಿತಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಈ ಸಮ್ಮೇಳನದಲ್ಲಿ ಅವರನ್ನು ಪರಿಗಣಿಸದೆ ಅವರಿಗೆ ಕೊಂಚ ಅವಮಾನ ಮಾಡಿದ್ದಾರೆ. ಇನ್ನು ವಿಚಾರ ಸಂಕೀರ್ಣ ಮತ್ತು ಕವಿಗೋಷ್ಠಿಯನ್ನು ತೆಗೆದುಕೊಂಡರೆ ಅದರಲ್ಲಿ ಅರ್ಹತೆ ಇಲ್ಲದ ಅನೇಕರಿಗೆ ಅವಕಾಶ ನೀಡಿದ್ದಾರೆ. ಅವನವೇ ವಾಚನ ಮಾಡಲು ಬರೆದ ಅನೇಕ ವ್ಯಕ್ತಿಗಳಿಗೆ ಲಾಬಿಯ ಮೂಲಕ ಅವಕಾಶ ನೀಡಿದ್ದಾರೆ. ಈ ಕವಿಗೋಷ್ಠಿಯಲ್ಲಿ ಅನೇಕರು ಯಾವುದೇ ಪುಸ್ತಕ ಕೂಡ ಪ್ರಕಟಣೆ ಮಾಡಿಲ್ಲ ಅಂಥವರಿಗೂ ಕೂಡ ಅವಕಾಶ ನೀಡಿದ್ದಾರೆ. ಇನ್ನು ಜಿಲ್ಲೆಯ ಅನೇಕ ಹಿರಿಯ ಸಾಹಿತಿಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದ ರೀತಿಯಲ್ಲಿ ಸಮ್ಮೇಳನವನ್ನು ಮಂಡ್ಯದಲ್ಲಿ ಮಾಡಿದ್ದಾರೆ. ಇನ್ನು ಪತ್ರಿಕಾಗೋಷ್ಠಿ ಮಾಡಿದ್ದಾಗೆಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗಾಗಿ ವಿಭಿನ್ನ ಘೋಷ್ಠಿಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ ಆದರೆ ಸಮ್ಮೇಳನದಲ್ಲಿ ಯಾವುದೇ ವಿದ್ಯಾರ್ಥಿಗಳಿಗಾಗಲಿ, ಯುವಪ್ರತಿಭೆಗಳಿಗಾಗಲಿ ಅವಕಾಶ ನೀಡಿಲ್ಲ .ತನ್ನ ಪರವಾಗಿ ಯಾರೂ ನಿಂತಿದ್ದರೋ ಅವರಿಗೆ ಅವಕಾಶ ನೀಡಿ ಸಮ್ಮೇಳನವನ್ನು ಮಂಡ್ಯದಲ್ಲಿ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ಸ್ಥಳೀಯ ಸಾಧಕರನ್ನು ಮರೆತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿ ಮುಗಿಸಿದ್ದಾರೆ.
ಉಚಿತ ಬಸ್ ಜಾತ್ರೆಗೆ ಜನಸಾಗರ:-
ಮಂಡ್ಯ ಜಿಲ್ಲೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿ ಗ್ರಾಮ ಪಂಚಾಯಿತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಜಿಲ್ಲಾಡಳಿತ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರತಿ ಶಾಲಾ ಕಾಲೇಜುಗಳಿಂದ ಎಲ್ಲಾ ವಿದ್ಯಾರ್ಥಿಗಳು ಸಮ್ಮೇಳನ ನೋಡಲು ತಮ್ಮ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದೊಂದಿಗೆ ಬಂದಿದ್ದರು. ಈ ಶೋಭೆಯು ಕೇವಲ ಒಂದು ದಿನವಿತ್ತು. ಮರುದಿನ ಅಷ್ಟೇ ವಿದ್ಯಾರ್ಥಿಗಳು ಸಮ್ಮೇಳನಕ್ಕೆ ಬಂದಿರಲಿಲ್ಲ. ಇನ್ನು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಶಿಕ್ಷಕರು ಮತ್ತು ಸರ್ಕಾರಿ ನೌಕರರು ಓ. ಓ. ಡಿಗಾಗಿ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾ ಲ ಕ್ಯೂನಲ್ಲಿ ನಿಂತಿದ್ದರು. ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿದ ಕಾರಣಕ್ಕೆ ಜೆರಾಕ್ಸ್ ಪ್ರತಿಯನ್ನು ತಂದು ಓ. ಓ. ಡಿ ಇಂದು ಎಲ್ಲರಿಗೂ ವಿತರಿಸಿದರು. ಈ ಸಮ್ಮೇಳನಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿಯ ಸದಸ್ಯರು, ಡೈರಿ ಸದಸ್ಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಮತ್ತು ಸರ್ಕಾರಿ ನೌಕರರು ಬರದೇ ಹೋಗಿದ್ದರೆ ಸಮ್ಮೇಳನಕ್ಕೆ ಯಾವುದೇ ರೀತಿಯ ಜನಸಾಗರ ಸೇರುತ್ತಿರಲಿಲ್ಲ. ಬಂದವರು ಪುಸ್ತಕಕೊಳ್ಳಲು ಅವಕಾಶವೇ ಇರಲಿಲ್ಲ. ಕಾರಣವೇನೆಂದರೆ ನೆಟ್ವರ್ಕ್ ಸಮಸ್ಯೆಯಿಂದ ಯಾರಿಗೂ ಡಿಜಿಟಲ್ ಪೇಮೆಂಟ್ ಮಾಡಲು ಆಗುತ್ತಿರಲಿಲ್ಲ. ಈ ಸಮ್ಮೇಳನದಲ್ಲಿ ಪುಸ್ತಕಗಳಿಗಿಂತ ಹೆಚ್ಚಾಗಿ ವಾಣಿಜ್ಯ ಮಳಿಗೆಯಲ್ಲಿ ಚುರುಕಾದ ವ್ಯಾಪಾರಗಳು ನಡೆದವು. ಸಮ್ಮೇಳನದಲ್ಲಿ ಪುಸ್ತಕ ಕೊಂಡುಕೊಳ್ಳುವ ವ್ಯಕ್ತಿಗಳಿಗೆ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿತ್ತು.
ಬಾಡೂಟಕ್ಕೆ ಹೆಚ್ಚಿನ ಬೇಡಿಕೆ:-
ಮಂಡ್ಯದಲ್ಲಿ ಸಮ್ಮೇಳನ ಎಂದು ಘೋಷಣೆ ಆದ ದಿನದಿಂದಲೂ ಅನೇಕ ಚರ್ಚೆಗಳು ಪ್ರಾರಂಭವಾಗುತ್ತಿತ್ತು. ಸಮ್ಮೇಳನ ಹತ್ತಿರ ಬರುತ್ತಿದ್ದ ಹಾಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಸಮ್ಮೇಳನದಲ್ಲಿ ಬಾಡೂಟವನ್ನು ನಿಷೇಧಿಸಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯು ಅನೇಕ ಸಂಘ ಸಂಸ್ಥೆಗಳಿಗೆ ಅವರ ಆಹಾರ ಪದ್ಧತಿಯ ವಿರುದ್ಧ ಹೋದ ಭಾವನೆ ಉಂಟಾಯಿತು. ಆ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಲೇಬೇಕೆಂದು ಹೆಚ್ಚಿನ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಾಡೂಟ ಮಾಡುವುದರ ಮೂಲಕ ಪ್ರತಿಭಟನೆ ಮಾಡಿದರು. ಸಮ್ಮೇಳನದ ಕೊನೆಯ ದಿನದಲ್ಲಿ ಅದೇ ಸಂಘಟನೆಯವರು ತಮ್ಮ ಸ್ವಂತ ಖರ್ಚಿನಲ್ಲಿ ಬಾಡೂಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದರು ಅನೇಕರಿಗೆ ಬಡಿಸಿ ಸಂತೋಷಪಟ್ಟರು. ಇದಕ್ಕೆಲ್ಲ ಸ್ಪಂದಿಸಿದ ಜಿಲ್ಲಾ ಆಡಳಿತ ಕೊನೆಯ ದಿನ ಸಮ್ಮೇಳನದ ಊಟದಲ್ಲಿ ಮೊಟ್ಟೆ ಸೇರಿಸಿ ವಿತರಣೆ ಮಾಡುವುದರ ಮೂಲಕ ಬಾಡೂಟಕ್ಕೆ ಹೊಸ ಮುನ್ನುಡಿಯನ್ನು ಬರೆದರು.
ಕೊನೆಯ ಮಾತು:-
ಮಂಡ್ಯ ಜಿಲ್ಲೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆಯ ರೂಪದಲ್ಲಿ ಮಾಡುವ ಬದಲಾಗಿ ಸರಳವಾಗಿ ಮಾಡಿ ಸರಳತೆಯನ್ನು ಮೆರೆಯಬಹುದಿತ್ತು. ಅದೇ ಹಣವನ್ನು ಉಳಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬಹುದಿತ್ತು. ಇದರೊಂದಿಗೆ ಗ್ರಂಥಾಲಯ ಇಲಾಖೆಯು ಖರೀದಿ ಮಾಡದೆ ಉಳಿದಿರುವ ಪುಸ್ತಕಗಳನ್ನು ಖರೀದಿ ಮಾಡಿ ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಬಹುದಿತ್ತು. ಸರಳ ಸಮ್ಮೇಳನ ಮಾಡುವುದರ ಮೂಲಕ ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭೆಗಳಲ್ಲಿ ಸರಳತೆಯ ಅರಿವನ್ನು ಮೂಡಿಸಬಹುದಿತ್ತು. ಇದನ್ನೆಲ್ಲ ಬಿಟ್ಟು ದ್ವಂದ ವೆಚ್ಚ ಮಾಡಿ ಖರ್ಚಿನ ಬಗ್ಗೆ ಗಮನ ಹರಿಸದೆ ಜಾತ್ರೆಯ ರೂಪದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮಾಡಿ ಮುಗಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಬೇಕು. ಜೊತೆಯಲ್ಲಿ ಯುವ ಲೇಖಕರು ಬರೆದಿರುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯ ಇಲಾಖೆಯಾದರೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಈ ಲೇಖನದ ಮೂಲಕ ಕೋರುತ್ತೇನೆ.
ಮೊಹಮ್ಮದ್ ಅಜರುದ್ದೀನ್
ಯುವ ಸಾಹಿತಿ/ಸಾಫ್ಟ್ವೇರ್ ಇಂಜಿನಿಯರ್
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲೂಕು
ಮಂಡ್ಯ ಜಿಲ್ಲೆ-571605
ಫೋನ್-9606160571