ಮಂಡ್ಯ:ಕನ್ನಡ ವಿಷಯದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಡಿಸೆಂಬರ್ 20, 21, 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮದ ಎಲ್ಲಾ ಜನರು ಬಂದು ಭಾಗವಹಿಸಬೇಕೆಂದು ತಹಶೀಲ್ದಾರ್ ಶಿವಕುಮಾರ್ ಬಿರಾದಾರ ಅವರು ಮನವಿ ಮಾಡಿದರು.
ತಾಲೂಕಿನ ಕೆರಗೋಡು ಗ್ರಾಮಕ್ಕೆ 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಕನ್ನಡ ಜಾಗೃತಿ ರಥ ಆಗಮಿಸಿದ ಹಿನ್ನೆಲೆ ಕೆರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಭವ್ಯ ಸ್ವಾಗತ ಕೋರಿ ಬರಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ರಾಜಕೀಯ ನಾಯಕರು ಭಾಗವಹಿಸಲ್ಲಿದ್ದಾರೆ.ಹಿರಿಯ ಕನ್ನಡ ಸಾಹಿತಿಗಳು ಕನ್ನಡದ ಭಾಷೆಯ ಬಗ್ಗೆ ಅರಿವು ಮೂಡಿಸಲ್ಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾಶಿವಲಿಂಗಯ್ಯ ಮಾತನಾಡಿ, ಹಿರಿಯ ನಾಯಕರು ಹೋರಾಟ ಪರಿಶ್ರಮದಿಂದ ಹರಿದು ಹಂಚಿ ಹೋಗಿದ್ದ ಜಿಲ್ಲೆಯನ್ನು ಒಟ್ಟು ಗೂಡಿಸಿದ್ದಾರೆ.ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ನಾವುಗಳು ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಕನ್ನಡ ಪ್ರೇಮಿಗಳಾಗಿ ಕೆಲಸ ಮಾಡೋಣ. ನಮ್ಮ ಮುಂದಿನ ಪೀಳಿಗೆಗೆ ಸಾಹಿತ್ಯದ ಮಹತ್ವವನ್ನು ತಿಳಿಸೋಣ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಕಲೆ ನಾಟಕ ಸಂಸ್ಕೃತಿ ಕ್ಷೇತ್ರಕ್ಕೆ ಮಂಡ್ಯ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಕೆರಗೋಡು ಸಂಚಿಹೊನ್ನಮ್ಮ, ತ್ರಿವೇಣಿ ಅಂತ ಕವಿಗಳನ್ನು ಕೊಟ್ಟ ತವರೂರಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆದು ಹಲವು ಸಮಸ್ಯೆಗಳನ್ನು ಚರ್ಚೆಗೆ ತಂದು ಬಗೆಹರಿಸುವ ಕೆಲಸವನ್ನು ಒಟ್ಟಾಗಿ ಮಾಡೋಣ. ಇಲ್ಲಿ ನಡೆಯುವ ವಿಷಯಾಧಾರಿತ ಚರ್ಚೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಗಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೈತ ನಾಯಕಿ ಸುನಂದ ಜಯರಾಮ್, ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರ ಅಧ್ಯಕ್ಷ ಚಂದ್ರಲಿಂಗು, ಸಿಪಿಐ ಮಹೇಶ್, ಪಿಎಸ್ಐ ದೀಕ್ಷಿತ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗರತ್ನ, ಸದಸ್ಯರಾದ ಶಾಂತಮ್ಮ ಮಹೇಶ್, ಪಿಡಿಒ ವಿನಯ್ ಕುಮಾರ್ ಹಾಜರಿದ್ದರು.