ಮಂಡ್ಯ;ಸಹಕಾರ ಸಂಘದಿoದ ಸಾಲ ಪಡೆದ ಷೇರುದಾರರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಮಾತ್ರ ಸಂಘಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಕಾಯಕಯೋಗಿ ಸಹಕಾರ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಲಹೆ ನೀಡಿದರು.
ನಗರದ ಹಿಂದಿಭವನದಲ್ಲಿ ನಡೆದ ಕಾಯಕಯೋಗಿ ಸಹಕಾರ ಸಂಘದ ಪ್ರಸಕ್ತ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಆರು ವರ್ಷಗಳಿಂದ ದುಡಿಯುವ ವರ್ಗದವರ ಪರವಾಗಿ ನಿಂತಿರುವ ಕಾಯಕಯೋಗಿ ಸಹಕಾರ ಸಂಘ ಬೀದಿಬದಿಯ ವ್ಯಾಪಾರಿಗಳು,ರೈತರು,ವಿವಿಧ ಕಾಯಕದಲ್ಲಿ ತೊಡಗಿರುವ ಕಾಯಕಯೋಗಿಗಳಿಗೆ ಸಾಲ ನೀಡಿ ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ.ಆದರೆ,ಕೆಲವರು ಪಡೆದ ಸಾಲವನ್ನು ವಾಪಸ್ ನೀಡದೆ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವುದು ಸಹಕಾರ ತತ್ವಕ್ಕೆ ವಿರುದ್ಧವಾಗಿದೆ.ಯಾವುದೇ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಸಾಲ ಮರುಪಾವತಿ ಮಾಡಬೇಕೆಂದರು.
ಸಂಘದ ನಿರ್ದೇಶಕ ಹೆಚ್.ಎಸ್.ಇಂದೂಧರ್ ಮಾತನಾಡಿ, ಸಹಕಾರವೇ ಜೀವನ,ಜೀವನವೇ ಸಹಕಾರ ಎಂಬ ತತ್ವದಡಿಯಲ್ಲಿ ಬುದ್ಧ,ಬಸವಣ್ಣ,ಅಂಬೇಡ್ಕರ್ ಆದರ್ಶಗಳ ಅನುಷ್ಠಾನದೊಂದಿಗೆ ಉದಯವಾದ ಕಾಯಕಯೋಗಿ ಸಹಕಾರ ಸಂಘ ಹಲವಾರು ಜನರಿಗೆ ಆರ್ಥಿಕವಾಗಿ ನೆರವಾಗಿದೆ.ಜನೋಪಯೋಗಿ ಯೋಜನೆಗಳನ್ನು ಹೊಂದಿರುವ ಸಂಘ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪರ ಕೆಲಸಗಳನ್ನು ಮಾಡಲಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ನಿರ್ದೇಶಕ ಎಂ.ಎಸ್.ಮoಜುನಾಥ್ ಮಾತನಾಡಿ,ಗ್ರಾಮೀಣ ಜನತೆಯ ಬದುಕನ್ನು ಹಸನುಗೊಳಿಸುವಲ್ಲಿ ಸಹಕಾರ ಸಂಘಗಳು,ಹಾಲುಉತ್ಪಾದಕರ ಸಂಘ,ವಿವಿದೋದ್ದೇಶದ ಸಹಕಾರ ಸಂಘಗಳು ಮಹತ್ತರ ಪಾತ್ರವಹಿಸಿದ್ದು,ಸದಸ್ಯರು ಸಂಘದ ಉದ್ದೇಶಗಳನ್ನು ಅರ್ಥೈಸಿಕೊಂಡು ಸಹಕಾರ ನೀಡಿದಲ್ಲಿ ಸಹಕಾರಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಯಕಯೋಗಿ ಸಹಕಾರ ಸಂಘದಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಷೇರುದಾರರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಮಹತ್ತರ ನಿರ್ಣಯಗಳನ್ನ ಸಭೆಯಲ್ಲಿ ಕೈಗೊಳ್ಳಲಾಯಿತು.
ಕಳೆದ ಕೆಲ ವರ್ಷಗಳಿಂದ ಸಂಘದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಸಿ.ಟಿ.ಗುರುಪ್ರಸಾದ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಮಾಜಿ ಅಧ್ಯಕ್ಷೆ ಅಪರ್ಣ ಶಿವಕುಮಾರ್, ನಿರ್ದೇಶಕ ಜಿ.ಕೆ.ವೆಂಕಟೇಶ್, ವಿ.ಆಂಜನಪ್ಪ, ಸಿದ್ದಲಿಂಗಮೂರ್ತಿ, ಜಿ.ಮಹಾಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.