ಮಂಡ್ಯ: ರೈತರ ಬದುಕು ಹಸನಾಗಬೇಕಾದರೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಹಾಲು ಒಕ್ಕೂಟ ಹಾಗೂ ಸಹಕಾರ ಸಂಘಗಳು ಬೆಳೆಯಲು ಸಾಧ್ಯ ಎಂದು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಹೇಳಿದರು.
ಮನ್‌ಮುಲ್ ಮಂಡ್ಯ ಉಪ ಕಚೇರಿಯಲ್ಲಿ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ ನಡೆದ ಸದಸ್ಯ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಹಾಗೂ ಮಂಡ್ಯ ತಾಲೂಕಿನಿಂದ ಮನ್ ಮುಲ್ ನಿರ್ದೇಶಕರಾಗಿ ಮರು ಆಯ್ಕೆಯಾದ ನೂತನ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಗೆಲ್ಲುವ ತನಕ ಮಾತ್ರ ರಾಜಕೀಯ ಗೆದ್ದ ನಂತರ ಅಭಿವೃದ್ಧಿಯತ್ತ ನಾವುಗಳು ಕೆಲಸ ಮಾಡುತ್ತೇವೆ, ಮಂಡ್ಯ ಹಾಲು ಒಕ್ಕೂಟಕ್ಕೆ ಮಂಡ್ಯ ತಾಲೂಕಿನಿಂದ ಮೂರು ಜನ ಸದಸ್ಯರನ್ನು ಮರು ಆಯ್ಕೆ ಮಾಡಿದ್ದೀರಿ, ಪುನರಾಯ್ಕೆ ಆಗುವುದು ಅಷ್ಟು ಸುಲಭವಲ್ಲ ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಡೈರಿಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ತಕ್ಷಣ ನಮ್ಮಗಳಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಿ ತಕ್ಷಣ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜಕೀಯಕ್ಕೋಸ್ಕರ ಸಂಘಗಳನ್ನು ಬಲಿಪಶು ಮಾಡಬೇಡಿ, ಸಣ್ಣಪುಟ್ಟ ವಿಚಾರಗಳಿದ್ದರೆ ನಾವುಗಳೇ ಬಗೆಹರಿಸಿಕೊಳ್ಳೋಣ. ಡೈರಿಗಳಲ್ಲಿ ಕಾರ್ಯದರ್ಶಿಗಳ ಪಾತ್ರ ಊರಿನ ಮುಖ್ಯ ಯಜಮಾನರಿದ್ದಂಗೆ, ಕಾರ್ಯದರ್ಶಿಗಳು ತಿಳಿ ಹೇಳುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯ ಏಳು ತಾಲೂಕುಗಳಿಗಿಂತ ಮಂಡ್ಯ ತಾಲೂಕು ಮಾದರಿ ಯಾಗಿದ್ದು ಹಾಗೂ ಉತ್ಪಾದಕರು ಗುಣಮಟ್ಟದ ಹಾಲನ್ನು ಡೈರಿಗಳಿಗೆ ಹಾಕುತ್ತಿದ್ದಾರೆ. ಯಾವುದೇ ಕಿರಿಕ್ ಇಲ್ಲದೆ ಇಲ್ಲಿನ ಸಿಬ್ಬಂದಿಗಳು ರೈತರಿಗೆ ನೆರವಾಗಿ ನಿಲ್ಲುವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವೈದ್ಯರು ಹಳ್ಳಿಗಳಿಗೆ ಹೋದಾಗ ಕಾರಿನಿಂದ ಕೆಳಗಿಳಿದು ಹಳ್ಳಿಯ ರೈತರಿಗೆ ಸಲಹೆ ಕೊಡಬೇಕು. ರೈತರು ಸರಬರಾಜು ಮಾಡಿದ ಹಾಲಿನಿಂದ ನಿಮ್ಮ ಜೀವನ ನಡೆಯುತ್ತಿದೆ ಆದ್ದರಿಂದ ರೈತರಿದ್ದರೆ ಮಾತ್ರ ನಾವು ನೀವು ಎಲ್ಲರೂ ಎಂದು ತಿಳಿದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಲು ಸಲಹೆ ಕೊಡಬೇಕು. ಜೊತೆಗೆ ರೈತರು 200 ರೂ.ಗಳನ್ನು ಕೊಟ್ಟು ಗುಂಪು ಮಾಡಿಸಿ ಎಂದು ಹೇಳಿದರು. ರಾಜ್ಯದ 15 ಒಕ್ಕೂಟಗಳಲ್ಲಿ ಮಂಡ್ಯ ಹಾಲು ಒಕ್ಕೂಟ ಮಾದರಿಯಾಗಿ ಕೆಲಸ ಮಾಡುತ್ತಿದೆ. ಹಾಲಿನ ಗುಣಮಟ್ಟ ಹಾಗೂ ಪೇಮೆಂಟ್ ಕೊಡುವಲ್ಲೂ ಸಹ ಒಕ್ಕೂಟ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ ರೈತರು ತಮ್ಮ ಮಕ್ಕಳಿಗೆ ವ್ಯವಹಾರದ ಜ್ಞಾನ ಕಲಿಸಿ ದಿನಕ್ಕೆ ಎಷ್ಟು ಲೀಟರ್ ಹಾಲು ಹಾಕಿದ್ದೀರಿ, ಹಾಲಿನ ಸಹಾಯಧನ ಬಂದಿದೆಯ ಇವುಗಳನ್ನ ತಮ್ಮ ಮಕ್ಕಳ ಕೈಯಲ್ಲಿ ಬರೆಯಿಸಿ ಎಂದರು.
ಈ ಸಂದರ್ಭದಲ್ಲಿ ಮನ್‌ಮುಲ್ ನಿರ್ದೇಶಕರಾದ ಯು.ಸಿ. ಶಿವಕುಮಾರ್, ಎಂ.ಎಸ್. ರಘುನಂದನ್, ಉಪ ವ್ಯವಸ್ಥಾಪಕ ಡಾ.ಮಂಜೇಶ್ ಗೌಡ, ಮನ್ ಮುಲ್ ಯೂನಿಯನ್ ನಿರ್ದೇಶಕ ಶಿವಕುಮಾರ್, ಡಾ.ಯಶವಂತ್, ಸೇರಿದಂತೆ ಇತರರು ಹಾಜರಿದ್ದರು.