ಮಂಡ್ಯ- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಯನ್ನು ಸೇರಿಸಿ ಪ್ರತಿಯೊಂದು ಶಾಲೆಯನ್ನು ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಅನುಷ್ಠಾನಮಾಡಿ ಅಭಿವೃದ್ಧಿ ಸಾಧಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ಮಳವಳ್ಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ವಹಿಸಬೇಕು, ಸರ್ಕಾರದ ಎಲ್ಲಾ ಯೋಜನೆಯ ಹಣವನ್ನು ದುರುಪಯೋಗವಾಗದಂತೆ ಕ್ರಮ ವಹಿಸಬೇಕು, ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೆಲಸ ನಿರ್ವಹಿಸಬೇಕು ಹಾಗೂ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಅವರು ಅನುಷ್ಠಾನ ಇಲಾಖೆಗಳು ನಿಗದಿತ ಅವಧಿಯೊಳಗೆ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.

ಇದೇ ವೇಳೆ ಸಿಇಒ ನಂದಿನಿ.ಕೆ.ಆರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಇಂದು ನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ತುಸು ಕಾಲ ಸಮಯ ಕಳೆದರು. ಕೇಂದ್ರದಲ್ಲಿ ಅಳವಡಿಸಿರುವ ವಿವಿಧ ಚಾರ್ಟಗಳನ್ನು ಮಕ್ಕಳಿಗೆ ತೋರಿಸಿ ಹೆಸರು ಹೇಳಲು ಸೂಚಿಸಿದಾಗ ಮಕ್ಕಳು ಅವುಗಳ ಹೆಸರು ಹೇಳಿದರು. ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆ ಪೋಷಣ ಟ್ರಾಕರ್ ದಾಖಲಾತಿ ಹಾಗೂ ತೂಕ, ಎತ್ತರ ಪರಿಶೀಲನೆ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಉಪಾಹಾರ ಮತ್ತು ಕೋಳಿ ಮೊಟ್ಟೆಗಳನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಿವಾಸ್. ಹೆಚ್.ಜಿ, ತಾಲ್ಲೂಕು ಯೋಜನಾಧಿಕಾರಿಗಳಾದ ದೀಪು, ಪಂ.ರಾ.ಸಹಾಯಕ ನಿರ್ದೇಶಕರಾದ ಪಾರ್ಥಸಾರಥಿ, ಗ್ರಾ.ಉ.ಸಹಾಯಕ ನಿರ್ದೇಶಕರಾದ ಲಿಂಗರಾಜು, ಎಲ್ಲಾ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ತಾಲ್ಲೂಕಿನ ಎಲ್ಲಾ ಪಿಡಿಒಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.