
ಮಂಡ್ಯ-ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜಾಥಾದಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಮಾಹಿತಿ ಫಲಕಗಳನ್ನು ಹಿಡಿದು ಜಾಥಾದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ನಗರದ ಸಂಜಯ್ ವೃತ್ತಿದಿಂದ ಜಾಥಾ ಪ್ರಾರಂಭವಾಗಿ ಆರ್ ಪಿ ರೋಡ್, 100 ಅಡಿ ರಸ್ತೆ, ವಿವಿ ರಸ್ತೆಯ ಮೂಲಕ ಸಂಚರಿಸಿತು.ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಜಾಗೃತಿ ಘೋಷಣೆ ಕೂಗುತ್ತ ಜಾಥಾದಲ್ಲಿ ಪಾಲ್ಗೊಂಡರು
‘ನೀವು ರಸ್ತೆ ದಾಟುವಾಗ ಎರಡೂ ಕಡೆ ನೋಡಿ’, ‘ವಾಹನ ಚಾಲನೆ ಮಾಡುವಾಗ ಅಧಿಕ ವೇಗ ಬೇಡ’, ‘ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿ’,’ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ’, ‘ಜೀಬ್ರಾ ಕ್ರಾ ಸಿಂಗ್ ನಲ್ಲಿ ಪಾದಚಾರಿಗಳಿಗೆ ಆದ್ಯತೆ ನೀಡಿ’ ಎಂಬ ರಸ್ತೆ ಸುರಕ್ಷತಾ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರು ದೇಶದಾದ್ಯಂತ ಜನವರಿ 11 ರಿಂದ 18 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಹಕಾರದೊಂದಿಗೆ ನಗರದ ಜನರಲ್ಲಿ ಜಾಗೃತಿ ಮೂಡಿಸುವ ಜಾಥಾ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಚಾರಿ ನಿಯಮ ಅನುಷ್ಠಾನವನ್ನು ಪೊಲೀಸ್ ಇಲಾಖೆ ತೀವ್ರಗೊಳಿಸಲಿದೆ. ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಶಿಸ್ತುಬದ್ಧ ಕ್ರಮ ಕೈಗೊಳ್ಳುತ್ತೇವೆ, ಮಂಡ್ಯ ನಗರ ಸಭೆಯಿಂದ ಮುಖ್ಯ ರಸ್ತೆಗಳಲ್ಲಿ ಅಳವಡಿಸಲು 24 ಕ್ಯಾಮೆರಾಗಳಿಗೆ ಅನುಮೋದನೆ ದೊರೆತಿದ್ದು, ಶೀಘ್ರವೇ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.
ಜಾಥಾದಲ್ಲಿ ಎ.ಎಸ್.ಪಿ ಗಂಗಾಧರ ಸ್ವಾಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಾ ಜಿಲ್ಲಾ ಮುಖ್ಯ ಆಯುಕ್ತ ಜಿ.ಪಿ. ಭಕ್ತವತ್ಸಲ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.