ಮಂಡ್ಯ-ಕಾಯಕ ಮತ್ತು ದಾಸೋಹದ ಮೂಲಕ ಸರ್ವರನ್ನೂ ಸಮಾನವಾಗಿ ಕಂಡ ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು 21ನೇ ಶತಮಾನದಲ್ಲಿ ಅನುಷ್ಠಾನಗೊಳಿಸಿದ ಕರ್ನಾಟಕರತ್ನ, ಪದ್ಮಭೂಷಣ ಸಿದ್ದಗಂಗಾ ಶ್ರೀಗಳ ದಾಸೋಹ ಸೇವೆ ಅವಿಸ್ಮರಣೀಯ ಎಂದು ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಬಣ್ಣಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪೂಜ್ಯಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಹುಣ್ಣಿಮೆಯ ಅಂಗವಾಗಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ನಡೆದ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿದುಬಂದವರಿಗೆ ಅನ್ನ ನೀಡುವುದೇ ಧರ್ಮ ಎಂದು ಲೋಕಕ್ಕೆ ಸಾರಿದ ಸಿದ್ದಗಂಗಾ ಶ್ರೀಗಳು ಜಾತಿ,ಮತ,ಪಂಥಗಳೆನ್ನದೆ ತಮ್ಮ ಸುದೀರ್ಘ 111ವರ್ಷಗಳ ಅವಧಿಯಲ್ಲಿ ಕೋಟ್ಯಾಂತರ ಮಂದಿಗೆ ಅನ್ನ,ಅರಿವು, ಆಸರೆಯನ್ನು ನೀಡಿ ಬಡಮಕ್ಕಳ ಉದ್ಧಾರಕ್ಕೆ ಶ್ರಮಿಸಿದ ಮಹಾನ್ ಸಂತ ಎಂದರು.
ಶಿಕ್ಷಣದ ಮೂಲಕ ಸಮಾಜದ ಉದ್ಧಾರ ಸಾಧ್ಯ ಎಂಬುದನ್ನು ಅರಿತಿದ್ದ ಸ್ವಾಮೀಜಿ ಸ್ವಾತಂತ್ರ್ಯ ಪೂರ್ವದಿಂದಲೇ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಒಂದು ವರ್ಗಕ್ಕೆ ಮೀಸಲಾಗಿದ್ದ ಸಂಸ್ಕೃತ ಭಾಷೆಯನ್ನು ಸರ್ವರೂ ಕಡ್ಡಾಯವಾಗಿ ಕಲಿಯಬೇಕೆಂದು ಸಂಸ್ಕೃತ ಪಾಠಶಾಲೆಯನ್ನು ಸಿದ್ದಗಂಗಾಮಠದಲ್ಲಿ ಆರಂಭಿಸಿ ಉಚಿತವಾಗಿ ಎಲ್ಲರಿಗೂ ವಿದ್ಯೆ ದೊರೆಯುವಂತೆ ಮಾಡಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಮಹಾಮಾನವತಾವಾದಿ ಎಂದು ಹೇಳಿದರು.
ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಪರಮಪೂಜ್ಯ ಸಿದ್ದಗಂಗಾಶ್ರೀಗಳು ನಾಡಿನ ಎಲ್ಲಾ ಮಠಾಧಿಪತಿಗಳಿಗೆ ಆದರ್ಶಪ್ರಾಯವಾಗಿದ್ದಾರೆ. ಜಾತ್ಯಾತೀತ ಪರಿಕಲ್ಪನೆಯ ಪ್ರತೀಕದಂತಿದ್ದ ಶ್ರೀಗಳು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ತಮ್ಮ ಕಾಯಕ ಹಾಗೂ ದಾಸೋಹ ಸೇವೆಯ ಮೂಲಕ ಜನಮಾನಸದಲ್ಲಿ ಬೇರೂರಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ ಎಂದರು.
ಪ್ರೀತಿ ವಾತ್ಸಲ್ಯಗಳ ಮಹಾಮೇರುವಾಗಿದ್ದ ಸಿದ್ದಗಂಗಾಶ್ರೀಗಳು ಬಡವ ಬಲ್ಲಿದರೆನ್ನದಂತೆ ಎಲ್ಲರನ್ನೂ ಸಮಭಾವದಿಂದ ಕಾಣುವ ಸಮದರ್ಶಿಗಳಾಗಿದ್ದರು. ಕಾಯಕಮಾಡದೆ ಉಣ್ಣುವುದು ಕೂಳಿಗೆ ಸಮ ಎಂದು ಬೋದಿಸಿದ ಸ್ವಾಮೀಜಿ ಕಾಯಕತತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ ಪರಿಣಾಮ ಇಂದಿಗೂ ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ಕಾಯಕಯೋಗಿ, ಲೋಕಜಂಗಮ, ನಡೆದಾಡುವ ದೇವರೆಂದು ನೆಲೆಯಾಗಿದ್ದಾರೆ.ಅಂತಹವರ ಸಂಸ್ಮರಣೆಯಲ್ಲಿ ಪ್ರತಿ ಹುಣ್ಣಿಮೆಯಲ್ಲೂ ಉದ್ಯಾನವನದಲ್ಲಿ `ದಾಸೋಹ’ ಸೇವೆ ನಡೆಸಲಾಗುತ್ತಿದೆ ಎಂದರು.
ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮoಜುನಾಥ್, ಲಿಂಗಾಯತಮಹಾಸಭಾ ಅಧ್ಯಕ್ಷ ಎಂ.ಎಸ್.ಮoಜುನಾಥ್ ಬೆಟ್ಟಹಳ್ಳಿ, ತಬ್ರೇಜ್ ಖಾನ್ , ಯೋಗೀಶ್‌ಗೌಡ, ಬಿಜೆಪಿ ಮುಖಂಡ ಜಗದೀಶ್, ಆಟೋಚಾಲಕರ ಸಂಘದ ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.