ಮಂಡ್ಯ-ಯುವಶಕ್ತಿ ದೇಶದ ಅಮೂಲ್ಯ ಆಸ್ತಿ, ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಬಾರದು. ಉತ್ತಮ ಹವ್ಯಾಸ ಹಾಗೂ ಸ್ವಯಂ ಶಿಸ್ತನ್ನು ರೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್ ಹಾಗೂ ಅನನ್ಯ ಹಾರ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮಿಮ್ಸ್ ಸಭಾಂಗಣದಲ್ಲಿ ನರ್ಸಿಂಗ್ ಹಾಗೂ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದ ಯಾರು ಕೂಡ ದುಶ್ಚಟವನ್ನು ಕಲಿತಿರುವುದಿಲ್ಲ. ಜೀವನದಲ್ಲಿ ಬೆಳೆಯುತ್ತ ಸ್ನೇಹಿತರು, ಕೆಲವು ಘಟನೆಗಳಿಂದ ಮದ್ಯ ಮತ್ತು ಮಾದಕ ವಸ್ತುಗಳು ಅಪಾಯಕರಿ ಎಂದು ತಿಳಿದಿದ್ದರು ಸೇವನೆಯನ್ನು ರೂಡಿಸಿಕೊಳ್ಳುತ್ತಾರೆ. ಇವುಗಳಿಂದ ದೂರವಿರಲು ಮೌಲ್ಯಯುತ ಜೀವನ ವಿದ್ಯಾರ್ಥಿಗಳಿಗೆ ಅತಿ ಮುಖ್ಯ ಎಂದರು.
ಸಾಮಾಜಿಕ ಪಿಡುಗಾಗಿರುವ ಮದ್ಯ ಮತ್ತು ಮಾದಕ ವಸ್ತುಗಳ ಸೇವನ ವೈಯಕ್ತಿಕ ಜೀವನ, ಆರೋಗ್ಯ ಮಾತ್ರವಲ್ಲ ಕೌಟುಂಬಿಕ ಜೀವನವನ್ನು ಸಹ ನಾಶ ಮಾಡುತ್ತದೆ. ವಿದ್ಯಾರ್ಥಿ ಜೀವನದ ಹಂತದಲ್ಲೇ ಉತ್ತಮ ಹವ್ಯಾಸ, ಸಹವಾಸ ಹಾಗೂ ಪರಿಸರವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಜೀವನದಲ್ಲಿ ನಿಗದಿಪಡಿಸಿಕೊಂಡಿರುವ ಗುರಿಯನ್ನು ಅಡೆತಡೆ ಇಲ್ಲದೇ ತಲುಪಬಹುದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಮದ್ಯವನ್ನು ಪರಾವನಗಿ ಪಡೆದು ಮಾರಾಟ ಮಾಡಬಹುದು ಹಾಗೂ ನಿಯಮಗಳನ್ನು ಅನುಸರಿಸಿ ಸೇವನೆ ಮಾಡಬಹುದು. ಆದರೂ ಸಹ ಮದ್ಯ ಸೇವನೆ ಕುರಿತು ಪ್ರತಿ ದಿನ ಪೊಲೀಸ್ ಕಂಟ್ರೋಲ್ ರೂಂಗೆ ಹಲವಾರು ದೂರುಗಳು ಬರುತ್ತವೆ. ಇದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ತೊಂದರೆ ಬಗ್ಗೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಮದ್ಯ ಸೇವನೆಯಿಂದ ದೂರವಿರಬೇಕು ಎಂದರು.

ಮಾದಕ ವಸ್ತುಗಳಾದ ಡ್ರಗ್ಸ್ ಮತ್ತು ಗಂಜಾ ಸಂಗ್ರಾಹ, ಮಾರಾಟ ಹಾಗೂ ಸೇವನೆ ಅಪರಾಧ, ಡ್ರಗ್ಸ್ ಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟಲು ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ ಟೆನ್ಸ್ (ಎನ್.ಡಿ.ಪಿ.ಎಸ್) ನಿಯಂತ್ರಣ ಕಾಯ್ದೆ 1987 ನ್ನು ಜಾರಿಗೊಳಿಸಲಾಯಿತು. ನಾರ್ಕೊಟಿಕ್ ಡ್ರಗ್ಸ್ ಮಾರಾಟ ಹಾಗೂ ಸೇವನೆಗೆ ಕಾನೂನಿನಲ್ಲಿ ದಂಡ ಹಾಗೂ ಜೈಲುವಾಸ ಎರಡೂ ಇರುತ್ತದೆ ಎಂದರು.
ಡ್ರಗ್ಸ್ ಗಳು ಪುಡಿ, ದ್ರವ, ಟ್ಯಾಬ್ಲೆಟ್ ಹಾಗೂ ವಿವಿಧ ರೂಪಗಳಲ್ಲಿ ಕಡಿಮೆ ಬೆಲೆಗಳಲ್ಲಿ ಸಿಗುತ್ತದೆ. ಇದರ ಜಾಲವನ್ನು ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ. ಇವುಗಳ ಮುಂದಿನ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಯದೇ ಸೇವನೆ ಮಾಡಿ ತಮ್ಮ ಜೀವ ಹಾಗೂ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಡ್ರಗ್ಸ್ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಎಂದರು.

ಮಿಮ್ಸ್ ನ ಮನೋವೈದ್ಯಕೀಯ ವಿಭಾಗದ ಡಾ: ಕುಮಾರ್ ಅವರು ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ವ್ಯಸನಿಗಳು ಸಹ ವ್ಯಸನ ಮುಕ್ತರಾಗಲು ಹಲವರು ಉತ್ತಮ ಅಭ್ಯಾಸಗಳಿವೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇದೇ ಸಂದರ್ಭದಲ್ಲಿ ತಂಬಾಕು, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರವಿರುವ ಬಗ್ಗೆ ಪ್ರತಿಜ್ಞೆ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ನಿರ್ದೇಶಕ ಡಾ: ನರಸಿಂಹಸ್ವಾಮಿ ಪಿ, ಅಧೀಕ್ಷಕರಾದ ಡಾ: ಶಿವಕುಮಾರ್ ಸಿ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ: ಕುಮಾರ್ ಹೆಚ್, ಮಂಡ್ಯ ನರ್ಸಿಂಗ್ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಕ್ಲೆಮೆಂಟ್ ಎಲ್ ಎಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್, ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ತಿಮ್ಮರಾಜು, ಮಿಮ್ಸ್ ನ ಕ್ರೀಡಾಧಿಕಾರಿ ಸುರೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಅನುಪಮಾ ಉಪಸ್ಥಿತರಿದ್ದರು.