ಮಂಡ್ಯ-ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಹೆಸರಲ್ಲೇ ಗೆದ್ದು ಬಂದು ಅಧಿಕಾರ ಹಿಡಿಯುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಮನಸ್ಸೋ ಇಚ್ಚೆ ಮಾತನಾಡಿದರೆ ಅವರ ನಾಲಿಗೆಯನ್ನು ಸೀಳಬೇಕಾಗುತ್ತದೆ ಎಂದು ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಯಾಣ ಬಸವೇಶ್ವರ ಮಠದ ಪೀಠಾಧ್ಯಕ್ಷರಾದ ಓಂಕಾರ ಸ್ವಾಮೀಜಿ ಹಾಗೂ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಹನ್ನೆರಡನೇ ಶತಮಾನದಲ್ಲಿ ಮೌಢ್ಯತೆ,ಅಸಮಾನತೆ, ಜಾತಿ ಶೋಷಣೆಯ ವಿರುದ್ಧ ಸಿಡಿದೆದ್ದು ಸರ್ವರನ್ನೂ ಸಮಭಾವದಿಂದ ಒಪ್ಪಿ ಅಪ್ಪಿಕೊಂಡ ವಿಶ್ವಸಂವಿಧಾನ ಶಿಲ್ಪಿ ಬಸವಣ್ಣನವರನ್ನು `ಹೊಳೆಗೆ ಹಾರಿಕೊಂಡರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಂಧಿಸಿ ಶಾಸಕಸ್ಥಾನವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವರ್ಗವನ್ನು ಒಲೈಸಿಕೊಳ್ಳಲು ಬಸವಣ್ಣನವರನ್ನೇ ಹೀಯಾಳಿಸಿದ ಹಿಂದೂ ಇಲಿ ಯತ್ನಾಳ್ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಸಹಾಯಕ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಬಸವಣ್ಣನವರು ಬೇಕು ಆದರೆ ಅವರನ್ನು ಹೀಯಾಳಿಸಿದಾಗ ಮೌನವಹಿಸಿರುವ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಜನ ಜಾಗೃತರಾಗಿ ಪಾಠ ಕಲಿಸಬೇಕಾಗುತ್ತದೆ ಎಂದರು.
ಕಾಯಕಯೋಗಿ ವಿಶ್ವಗುರು ಮಹಾನ್ ಮಾನವತಾವಾದಿ ಬಸವಣ್ಣನವರು ವಿಶ್ವಕ್ಕೆ ದಾರಿದೀಪವಾಗಿದ್ದಾರೆ.ಬಿಜೆಪಿ ನಾಯಕರು ಬಸವಣ್ಣನವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ ಅವರನ್ನು ಅವಹೇಳನ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯಿಂದ ಉಚ್ಛಾಟಿಸುವ ಶಕ್ತಿಯನ್ನು ಕರ್ನಾಟಕ ಹಾಗೂ ಕೇಂದ್ರದ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ.ಬಸವಣ್ಣನವರ ಹೆಸರನ್ನ ಇಟ್ಟುಕೊಂಡಿರುವ ಯತ್ನಾಳ್ ಅಣ್ಣನವರ ಆದರ್ಶಗಳನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ.ಬಸವತತ್ವ ವಿರೋಧಿ ಬಸವನಗೌಡ ಪ್ರಚಾರಕ್ಕಾಗಿ ಬಸವಣ್ಣನವರನ್ನು ಹೀಯಾಳಿಸುವಷ್ಟರ ಮಟ್ಟಿಗೆ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಕೂಡಲೇ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಬಸವಣ್ಣನವರ ಅನುಯಾಯಿಯಾಗಿದ್ದರೆ ಅವರು ಹಣೆಯಲ್ಲಿ ವಿಭೂತಿ ಧರಿಸಿ ಕೊರಳಲ್ಲಿ ಇಷ್ಟಲಿಂಗ ಧರಿಸಬೇಕಿತ್ತು. ಆದರೆ, ಬಸವತತ್ವ ವಿರೋಧಿಯಾಗಿರುವ ಅವರು, ಹಣೆಯಲ್ಲಿ ಕುಂಕುಮದ ನಾಮವನ್ನು ಹಾಕಿಕೊಂಡು ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಸವತತ್ವದ ಮಹತ್ವವನ್ನೇ ತಿಳಿಯದೆ ಮೂಡನಂಬಿಕೆಯ ದಾಸರಾಗಿ, ಯಾವುದೋ ಒಂದು ಸಂಘಟನೆಯನ್ನು ಮೆಚ್ಚಿಸಲು ವೈಯಕ್ತಿಕ ಬದುಕಿಗೆ ಗೋಮುಖ ವ್ಯಾಗ್ರದ ವೇಶವನ್ನ ಧರಿಸಿ ರಾಜಕಾರಣ ಮಾಡುತ್ತಿರುವ ಯತ್ನಾಳ್ ಧರ್ಮವನ್ನ ಗಿರವಿ ಇಡುವ ಕೆಲಸ ಮಾಡಬಾರದು. ಯತ್ನಾಳ್ ಅಂತ ರಾಜಕಾರಣಿಗಳು ಬಸವಣ್ಣನವರ ಆದರ್ಶ ತತ್ವಗಳನ್ನು ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈದ ಸಂಗತಿ.
ರಾಜ್ಯಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದನ್ನು ಸಹಿಸಲಾಗದ ಬಿಜೆಪಿ ನಾಯಕರು ಹಿಂದುತ್ವದ ಸೋಗಿನಲ್ಲಿ ಅಣ್ಣಬಸವಣ್ಣನವರ ಆಶಯಗಳನ್ನು ಹತ್ತಿಕ್ಕಲು ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಇಂತಹ ಘಟನೆಗಳು ಮರುಕಳಿಸಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ವಿಧಾನಸಭೆಯ ಸಭಾಧ್ಯಕ್ಷರು ಈ ಕೂಡಲೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡಿರುವ ಯತ್ನಾಳ್ ಅವರ ಶಾಸಕಸ್ಥಾನವನ್ನು ವಜಾಗೊಳಿಸಬೇಕೆಂದು ಕೋರಿದರು.
ಶಾಸಕ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದೇವೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಶಾಸಕರನ್ನು ವಜಾಗೊಳಿಸಬೇಕೆಂದು ವಿಧಾನಸಭೆಯ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾ ಮುಖಂಡರಾದ ಯೋಗಶಿಕ್ಷಕ ಶಿವರುದ್ರಸ್ವಾಮಿ, ಮದ್ದೂರು ತಾಲ್ಲೂಕು ಅಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಬೆಳ್ಳಪ್ಪ, ವೀರಭದ್ರಯ್ಯ ಹಲಸಹಳ್ಳಿ, ಆನಂದ್ ಕೊನ್ನಾಪುರ, ಮಳವಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
————ಶಿವಯೋಗಿ