ಬೇಲೂರು, ಮೇ 7, 2025: ಬೇಲೂರಿನ ವಿ.ಆರ್. ಕನ್‌ವೆನ್ಷನ್ ಹಾಲ್‌ನಲ್ಲಿ ನಡೆದ ವಿಶಿಷ್ಟ ವೈಚಾರಿಕ / ಮಂತ್ರಮಾಂಗಲ್ಯ ಕಾರ್ಯಕ್ರಮದಲ್ಲಿ 24×7 ನ ಸಕ್ರಿಯ ಕಾರ್ಯಕರ್ತರಾದ ಪ್ರದೀಪ್ ಟಿ.ಎಂ ರವರು ಉಮಾ ರವರೊಂದಿಗೆ ನವಜೀವನಕ್ಕೆ ಕಾಲಿಟ್ಟರು. ಸಂಪ್ರದಾಯ ಹಾಗೂ ಪ್ರಗತಿಪರ ಆಲೋಚನೆಯ ಸಂಯೋಜನೆಯೊಂದಿಗೆ ನಡೆದ ಈ ಕಾರ್ಯಕ್ರಮ ಗಮನಸೆಳೆದಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಬೈಲೂರು ಮಠ, ಮುಂಡರಗಿ, ಬೆಳಗಾವಿಯಿಂದ ಆಗಮಿಸಿ ಮಾನವೀಯ ಮೌಲ್ಯಗಳಲ್ಲಿ ಮಂತ್ರಮಾಂಗಲ್ಯದ ಮಹತ್ವ ಕುರಿತು ಭಾವಪೂರ್ಣ ಭಾಷಣ ನೀಡಿದರು. ಹಿರಿಯ ಚಿಂತಕರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರಾಗಿರುವ ಶ್ರೀಮತಿ B.T. ಲಲಿತಾ ನಾಯಕರವರು ವೈಚಾರಿಕ ಮಂತ್ರಮಾಂಗಲ್ಯ ಬೋಧನೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು TD ತಮ್ಮಣ್ಣ ಗೌಡರು ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಯನ್ನು ಬಳ್ಳೂರು ಲಕ್ಷ್ಮಣರು ನೀಡಿದರು ಮತ್ತು ಶಿಕ್ಷಕ ಸಂದೀಪ್ ಅವರು ಕಾರ್ಯಕ್ರಮದ ಶೀರ್ಷಿಕೆ ಹಾಗೂ ಉದ್ದೇಶದ ಕುರಿತಂತೆ ಪ್ರಸ್ತಾವನೆ ಓದಿದರು. ಚಿಕ್ಕಮಗಳೂರಿನ ಗೆಳೆಯರು ಕ್ರಾಂತಿಕಾರಿ ಹಾಡುಗಳ ಮೂಲಕ ಸಮಾರಂಭಕ್ಕೆ ಸಾಂಸ್ಕೃತಿಕ ಶೋಭೆ ಸೇರಿಸಿದರು.

ಸಾಲುಮರದ ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ್, ಪ್ರಗತಿಪರ ಚಿಂತಕ ಮೊಯಿದ್ದೀನ್ (ಚಿಕ್ಕಮಗಳೂರು), ಹಾಗೂ e. ದಿನ. com ನ ಹಾಸನ-ಚಿಕ್ಕಮಗಳೂರು ವಿಭಾಗದ ಗಿರಿಜಾ ಅವರು ಉಪಸ್ಥಿತರಿದ್ದು, ತಮ್ಮ ಉಪಸ್ಥಿತಿಯಿಂದ ಸಮಾರಂಭಕ್ಕೆ ಹೆಚ್ಚಿನ ಮೌಲ್ಯವನ್ನೂ ಸೇರಿಸಿದರು. ಹಲವಾರು ಪ್ರಗತಿಪರ ಸಂಘಟನೆಗಳ ಮುಖಂಡರೂ ಪಾಲ್ಗೊಂಡು ಈ ವಿಶೇಷ ವಿವಾಹ ಸಮಾರಂಭವನ್ನು ಯಶಸ್ವಿಗೊಳಿಸಿದರು.

ಸಮಾಜದಲ್ಲಿ ಪ್ರಗತಿಪರ ಮೌಲ್ಯಗಳ ಸ್ಥಾಪನೆಗೆ ಈ ರೀತಿಯ ವೈಚಾರಿಕ ಮಂತ್ರಮಾಂಗಲ್ಯಗಳು ದಾರಿದೀಪವಾಗಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.
-ನೂರು