ತುಮಕೂರು-ಜಿಲ್ಲೆಯಲ್ಲಿ ಗ್ಯಾರಂಟಿ-ಯೋಜನೆಗಳನ್ನು-ಯಶಸ್ವಿಯಾಗಿ- ಅನುಷ್ಠಾನಗೊಳಿಸಿ-ಸಚಿವ ಡಾ.ಜಿ. ಪರಮೇಶ್ವರ


ತುಮಕೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ , ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ತೋರಬಾರದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.


ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 2024-25 ನೇ ಸಾಲಿನ 3 ನೇ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 2023 ರಿಂದ ಅಕ್ಟೋಬರ್ 2024 ರವರೆಗೆ 90,38,371 ಫಲಾನುಭವಿಗಳಿಗೆ ಒಟ್ಟು1807.67ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ೨೦೨೩ ಜೂನ್‌ನಿಂದ ಜನವರಿ 2025ರವರೆಗೆ 1164.14 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ಒಟ್ಟು ಆದಾಯ 34184.97 ಲಕ್ಷ ರೂ.ಗಳಾಗಿದೆ.

ಯುವನಿಧಿ ಯೋಜನೆಯಲ್ಲಿ ಜನವರಿ 2025 ಅಂತ್ಯಕ್ಕೆ 7743 ಯುವಜನರು ನೋಂದಣಿಯಾಗಿದ್ದು,5425 ಜನರಿಗೆ ಡಿಬಿಟಿ ಮೂಲಕ 7.60,83,000 ರೂ. ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಸೆಪ್ಟೆಂಬರ್ 2024ರವರೆಗೆ 6,08,446 ಪಡಿತರ ಚೀಟಿಗಳಿಗೆ ಒಟ್ಟು 509,43,46,990 ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 2023 ರಿಂದ ನವೆಂಬರ್ 2024 ರವರೆಗೆ 802093 ಫಲಾನುಭವಿ ಗೃಹ ಬಳಕೆ ಸ್ಥಾವರಗಳಿಗೆ 343.13 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.


ನಂತರ ಗೃಹ ಸಚಿವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ತಮ್ಮ ಸವಲತ್ತುಗಳನ್ನು ಅಧಿಕಾರಿಗಳು ವಿಳಂಬ ಮಾಡದೆ ಪಾವತಿ ಮಾಡಬೇಕೆಂದರು. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್-1 ರಿಂದ 4 ರವರೆಗೂ ಒಟ್ಟು 3699 ಕಾಮಗಾರಿಗಳಿದ್ದು, ಇವುಗಳಿಗೆ 2976 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, 8೦೦ ಕಾಮಗಾರಿ ಪೂರ್ಣಗೊಂಡಿದ್ದು, 1555 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಬಾಕಿ ಇರುವ ಕಾಮಗಾರಿಗಳನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲೆಯಲ್ಲಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ಬೆಳೆ ವಿಮೆ, ಇವುಗಳನ್ನು ಆದ್ಯತೆ ಮೇರೆಗೆ ಜನರಿಗೆ ನೀಡಬೇಕೆಂದು ತಾಕೀತು ಮಾಡಿದರು.
ಆರೋಗ್ಯ ಸೇವೆ ನೀಡುವಲ್ಲಿ ಸಹ ಜಿಲ್ಲೆ ಪ್ರಗತಿ ಸಾಧಿಸಿ ಗರ್ಭಿಣಿ, ಬಾಣಂತಿಯರ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡಬೇಕೆಂದರು.


ಸಭೆಯಲ್ಲಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಪ್ರಭು ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?