ತುಮಕೂರು-ಕಾಲಮಿತಿಯಲ್ಲಿ-ರೈಲ್ವೆ-ಯೋಜನೆಗಳನ್ನು-ಪೂರ್ಣಗೊಳಿಸಲು-ಸಚಿವ-ಸೋಮಣ್ಣ-ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ   ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ   ರೈಲ್ವೆ   ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಹೊಸದಾಗಿ ಮಂಜೂರಾದ ರೈಲ್ವೆ ಯೋಜನೆಗಳನ್ನು ಮಾರ್ಚ್ 25 ರೊಳಗಾಗಿ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಡಿ.ರಾಮಪುರ ಗೇಟ್, ಬಡ್ಡಿಹಳ್ಳಿ ಗೇಟ್, ದೊಡ್ಡನಕೆರೆ ಸೇರಿ ಮತ್ತಿತರ ರೋಡ್ ಅಂಡರ್ ಬ್ರಿಡ್ಜ್ ಹಾಗೂ ಬೆನಚಗೆರೆ ಗೇಟ್, ಹಿಂಡಿಸ್ಕೆರೆ ಗೇಟ್, ಶಾರದಾ ನಗರ, ಬಿದರೆಗುಡಿ ಗೇಟ್, ನಂದಿಹಳ್ಳಿ ಗೇಟ್ ಸೇರಿ ಇತರೆ ರೋಡ್ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೊಂಡು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದರು.

      ಜಿಲ್ಲೆಯ ಹೊನ್ನವಳ್ಳಿ, ಬೆಣ್ಣೆಗೆರೆಯಲ್ಲಿ ಕೈಗೊಂಡಿರುವ ಲೆವೆಲ್ ಕ್ರಾಸಿಂಗ್ ಕಾಮಗಾರಿ ಶೇ.೯೦ರಷ್ಟು ಪೂರ್ಣಗೊಂಡಿದೆ.  ರೈಲ್ವೆ ಯೋಜನೆಗಳ ಕಾಮಗಾರಿಗಳನ್ನು ಮಳೆಯಿಂದ ತೊಂದರೆಯಾಗದಂತೆ ನಿರ್ಮಾಣ ಮಾಡಬೇಕು.  ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಯೋಜನೆಗಳನ್ನು ಚುರುಕುಗೊಳಿಸಬೇಕು.   ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ನನ್ನ ಗಮನಕ್ಕೆ ತರಬೇಕೆಂದರಲ್ಲದೆ ಈ ರೈಲ್ವೆ ಅಭಿವೃದ್ಧಿ ಯೋಜನೆಗಳಿಂದ ಪ್ರಾದೇಶಿಕ ಸಾರಿಗೆ ಸಂಪರ್ಕ ವ್ಯವಸ್ಥೆಗಳು   ಸುಧಾರಿಸುವುದರಿಂದ  ವೇಗವಾಗಿ ಪೂರ್ಣಗೊಳಿಸಲು ಸೂಚಿಸಿದರು.

     ತುಮಕೂರು ತಾಲೂಕಿನ ಹೆಗ್ಗೆರೆ ಲೆವೆಲ್ ಕ್ರಾಸಿಂಗ್ ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ ನಂತರ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

     ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ   ಅಮಿತೇಶ ಕುಮಾರ್ ಸಿಂಹ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ   ಆಶುಟೋಷ್ ಮಾತುರ್, ಮುಖ್ಯ ಇಂಜಿನಿಯರ್(ನಿರ್ಮಾಣ)   ಸರೋಜ್ ಕುಮಾರ್ ಬನ್‌ವಾಲ್,   ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ,   ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಮತ್ತಿತರ ಅಧಿಕಾರಿಗಳು ಸಭೆಗೆ ಹಾಜರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?