ತುಮಕೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಒಕ್ಕೂಟವು ಪ್ರೀ ಸ್ಕೂಲ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದು, ನಗರದ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಅಂಗಸಂಸ್ಥೆಯಾದ ಶ್ರೀರಂಗ ವಿದ್ಯಾಮಂದಿರ ಶಾಲೆ ಹಾಗೂ ನವಕೀಸ್ ಕೇರ್ ಕಿಂಡರ್‌ನ ಅಭಿವೃದ್ಧಿಗಾಗಿ ಸಂಘದೊಂದಿಗೆ ಪಾಲುದಾರಿಕೆಯ ಒಡಂಬಡಿಕೆ ಮಾಡಿಕೊಂಡಿದೆ.
ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಶ್ರೀಧರ್ ಮಂಗಳವಾರ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಶ್ರೀರಂಗ ವಿದ್ಯಾಮಂದಿರದಲ್ಲಿ 1ರಿಂದ 10ನೇ ತರಗತಿವರೆಗೆ ಬಡಮಕ್ಕಳು ಕಲಿಯುತ್ತಿದ್ದಾರೆ. ಸಂಸ್ಥೆಯನ್ನು ವ್ಯಾಪಾರವಾಗಿ ಪರಿಗಣಿಸಿದೆ ಸಂಘದಿಂದ ಸೇವೆಯಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ.ಮಕ್ಕಳಿಗೆ ಅತ್ಯಾಧುನಿಕ ಶೈಕ್ಷಣಿಕ ಸೇವೆ ಒದಗಿಸುವ ಸಲುವಾಗಿ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ನಮ್ಮ ಸಂಸ್ಥೆಗೆ ನವೀನ ಮಾದರಿಯ ಟಚ್ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರದ ಮಹಾಲಕ್ಷ್ಮಿ ನಗರದಲ್ಲಿ ವಿಶಾಲ ಆವರಣದಲ್ಲಿ ಸುಸಜ್ಜಿತವಾಗಿರುವ ಶ್ರೀರಂಗ ವಿದ್ಯಾಮಂದಿರದಲ್ಲಿ ಇದೇ ಶೈಕ್ಷಣಿಕ ವರ್ಷವಾದ 2025-26ನೇ ಸಾಲಿಗೆ ಎಂ.ಎಸ್.ರಾಮಯ್ಯ ಸಂಸ್ಥೆ ಸಹಯೋಗದೊಂದಿಗೆ ವಕೀಸ್ ಕಿಂಡರ್ ಪ್ರಿ ಸ್ಕೂಲ್, ಎಲ್.ಕೆ.ಜಿ, ಯು.ಕೆ.ಜಿಯ 100 ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ಉಗ್ರಪ್ಪ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿರುವ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ, ಶಿಕ್ಷಣಕ್ಕೆ ಉತ್ತಮ ತಳಹದಿ ಅಗತ್ಯವೆಂದು ಪ್ರಾಥಮಿಕ ಶಾಲಾ ಶಿಕ್ಷಣ ಕ್ಷೇತ್ರ ಪ್ರವೇಶ ಮಾಡಿದೆ.ಮಕ್ಕಳು ಪ್ರಾಥಮಿಕ ಶಿಕ್ಷಣ ಸದೃಢವಾದರೆ ಮುಂದಿನ ತರಗತಿಗಳನ್ನು ಯಶಸ್ವಿಯಾಗಿ ಮುಂದುವರೆಸುತ್ತಾರೆ ಎಂದರು.
ಶ್ರೀರಂಗ ವಿದ್ಯಾಮಂದಿರದ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರಿ ಸ್ಕೂಲ್ ಶಿಕ್ಷಣದೊಂದಿಗೆ ಮುಂದಿನ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು.ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು, ಅದಕ್ಕಾಗಿ ಸಂಸ್ಥೆ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದೆ,ಇದಕ್ಕೆ ಪೂರಕವಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್, ಸಂಗೀತ, ಕುಂಚಿಟಿಗ ಒಕ್ಕಲಿಗ ಸಂಘದ ಅಧ್ಯಕ್ಷರಾದ ಕೆ.ಶ್ರೀಧರ್, ಉಪಾಧ್ಯಕ್ಷ ಅಶೋಕ್, ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜು, ನಿರ್ದೇಶಕರಾದ ಬಸವರಾಜು, ವೀರನಾಗಪ್ಪ, ಲಕ್ಷ್ಮಿಕಾಂತ್ ಮೊದಲಾದವರು ಭಾಗವಹಿಸಿದ್ದರು.
- ಕೆ.ಬಿ ಚಂದ್ರಚೂಡ