ಮೂಡಿಗೆರೆ: ಪ.ಪಂ.ಯ ಬಿಜೆಪಿ ಸದಸ್ಯರ ನಡುವೆ ಒಡಕು ಸೃಷ್ಟಿ ಮಾಡಿ ಅಧ್ಯಕ್ಷಗಾದಿ ಹಿಡಿಯಲು ಹುನ್ನಾರ ನಡೆಸುವ ಸಲುವಾಗಿ ತನ್ನೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ಸಂಭಾಷಣೆಯ ಆಡಿಯೋ ತುಳುಕನ್ನು ಕಾಂಗ್ರೆಸ್‌ನ ಪ.ಪಂ. ಸದಸ್ಯರೋರ್ವರು ವಾಟ್ಸಪ್ ಮೂಲಖ ವೈರಲ್ ಮಾಡಿದ್ದಾರೆಂದು ಪ.ಪಂ. ಸದಸ್ಯೆ ಕಮಲಮ್ಮ ಹೇಳಿದರು.
ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಗೀತಾ ರಂಜನ್ ಅಜಿತ್ ಕುಮಾರ್ ಅವರು ಪ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಬಾರಿ ಪೈಪೋಟಿ ನಡೆಯುತ್ತಿದೆ. ಪ.ಪಂ.11 ಸ್ಥಾನದ ಪೈಕಿ ಕಾಂಗ್ರೆಸ್‌ನ 6 ಸದಸ್ಯರು ಹಾಗೂ ಶಾಸಕರ ಮತ ಸೇರಿ 7 ಮತಗಳಾಗುತ್ತದೆ. ಬಿಜೆಪಿಯಲ್ಲಿ 5 ಮಂದಿ ಸದಸ್ಯರಿಗದ್ದು, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ಸಂಸದ ಕೋಟಾ ಶ್ರೀನಿವಾಸ್ ಅವರ ಮತ ಸೇರಿದರೆ ಒಟ್ಟು 7ಮತಗಳಾಗುತ್ತದೆ. ಹಾಗಾಗಿ ಕಾಂಗ್ರೆಸ್‌ನವರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಗಾಧೆ ಗಿಟ್ಟಿಸಿಕೊಳ‍್ಳಲು ಇಂತಹ ಕೀಳು ಮಟ್ಟದ ರಾಜಕೀಯ ಮಾಡಲು ಮುಂದಾಗಿದ್ದಾರೆಂದು ದೂರಿದರು.
ಎರಡೂ ಪಕ್ಷದಲ್ಲಿ ಸಮಬಲ ಇರುವುದರಿಂದ ಕಾಂಗ್ರೆಸ್‌ನವರು ಬಿಜೆಪಿ ಸದಸ್ಯರಿಗೆ ಆಮಿಷ್ವೊಡ್ಡಿ ಓಲೈಕೆ ಮಾಡಲು ಮುಂದಾಗುತ್ತಾರೆ. ಅಧ್ಯಕ್ಷರ ರಾಜೀನಾಮೆ ಪತ್ರ ಅಂಗೀಕಾರವಾಗುವವರೆಗೂ ಕಾಂಗ್ರೆಸ್‌ನವರು ಎಲ್ಲಿ ಕರೆದರೂ ಹೋಗಬಾರದು. ಅವರಿಗೆ ಬೆಂಬಲ ನೀಡುವಂತೆ ವರ್ತಿಸಬೇಕು. ಇಲ್ಲವಾದರೆ ಅಧ್ಯಕ್ಷರ ರಾಜೀನಾಮೆ ಅಂಗೀಕಾರ ಮಾಡಿಸದೇ ರಾಜಿನಾಮೆಯನ್ನು ವಾಪಾಸು ಪಡೆಯುವ ಎಲ್ಲಾ ಸಾಧ್ಯತೆಗಳಿರುತ್ತದೆ ಎಂದು ಎಂ.ಕೆ.ಪ್ರಾಣೇಶ್ ಸೇರಿದಂತೆ ಹಿರಿಯ ನಾಯಕರು ನಮ್ಮೆಲ್ಲಾ ಸದಸ್ಯರಿಗೆ ಈ ಹಿಂದೆಯೇ ಮಾರ್ಗದರ್ಶನ ನೀಡಿದ್ದರು. ಹಾಗಾಗಿ ಪಕ್ಷದ ಹಿರಿಯರ ಸಲಹೆಯಂತೆ ನಾವೆಲ್ಲರು ನಡೆದುಕೊಂಡಿದ್ದೇವೆ.

ಅಧ್ಯಕ್ಷರ ರಾಜೀನಾಮೆ 9 ದಿನದ ನಂತರ ಅಂಗೀಕಾರವಾಯಿತು. ನಂತರ ಕಾಂಗ್ರೆಸ್‌ನವರಿಗೆ ನಾವು ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದಾಗ, ತನ್ನೊಂದಿಗೆ ಸುಮಾರು 7ದಿನದ ಹಿಂದೆ ಮಾತನಾಡಿದ ಸಂಭಾಷಣೆಯನ್ನು ಬೇಕೆಂತಲೇ ವೈರಲ್ ಮಾಡಿದ್ದಾರೆ ಹಾಗು ಈ ರೀತಿಯ ಆಮಿಷವೊಡ್ಡಿ ಬಿಜೆಪಿ ಸದಸ್ಯರನ್ನು ಓಲೈಕೆ ಮಾಡಲು ಯತ್ನಿಸಿದ ಬಗ್ಗೆ ಹಿರಿಯ ನಾಯಕರ ಗಮನಕ್ಕೆ ತಂದು ಅವರ ಸೂಕ್ತ ಸಲಹೆ ಪಡೆದು ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ.ಪಂ. ಸದಸ್ಯರಾದ ಮನೋಜ್, ಆಶಾಮೋಹನ್, ಮುಖಂಡರಾದ ಟಿ.ಹರೀಶ್, ರಂಗನಾಥ್, ಪಟೇಲ್ ಮಂಜು, ನಯನ ತಳವಾರ ಉಪಸ್ಥಿತರಿದ್ದರು.