ಮೂಡಿಗೆರೆ:ಈ ಬಾರಿಯ ಅತಿವೃಷ್ಟಿಯಿಂದ ರೈತರ ಜಮೀನು ಮತ್ತು ಬೆಳೆ ಹಾನಿಗೆ ಪರಿಹಾರ ಒದಗಿಸುವಂತೆ ಸದನದಲ್ಲಿ ಚರ್ಚಿಸಲಾಗಿದೆ.ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಶಾಸಕಿ ನಯನ ಮೋಟಮ್ಮ ಭರವಸೆ ನೀಡಿದರು.
ಚಂದುವಳ್ಳಿ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರ ಬಗ್ಗೆ ನನಗೆ ಅತೀವ ಕಾಳಜಿಯಿದ್ದು ಅವರ ಎಲ್ಲ ಸಮಸ್ಯೆಗಳ ಪರಿಹರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಜೊತೆಗೆ ತಾಲೂಕಿನ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲು ತಯಾರಿ ನಡೆಸಲಾಗಿದ್ದು ಪ್ರತಿ ಗ್ರಾಮಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಚಂದುವಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಅಧಿಕಾರಿಗಳು ಸೂಕ್ತ ಜಾಗ ಗುರುತಿಸಲಿದ್ದಾರೆ.ನಂತರ ಸಮದಾಯ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
ಕುಡಿಯುವ ನೀರಿನ ಯೋಜನೆಗೆ ಜೆ.ಜೆ.ಎಂ ಯೋಜನೆಯಲ್ಲಿ ಎಲ್ಲ ಗ್ರಾಮದ ಜನರಿಗೂ ನೀರೊದಗಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ.
ಮುಂದಿನ ವರ್ಷದ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಪ್ರತಿಮನೆಗೂ ಶುದ್ದ ನೀರು ಪೂರೈಕೆ ಆಗಲಿದೆ.ವಿದ್ಯುತ್ ಸೇರಿದಂತೆ ಜನರ ಮೂಲಭೂತಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು.
ನಿವೇಶನಕ್ಕಾಗಿ ಗ್ರಾ.ಪಂ.ಗಳಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದವರಿಗೆ ನಿವೇಶನ ಒದಗಿಸಲು ಜಾಗ
ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಜಾಗ ಸಿಕ್ಕಿದ ಕೂಡಲೇ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗುವುದು ಎಂದು ತಿಳಿಸಿದರು.
ಕೂವೆ ಗ್ರಾ.ಪಂ.ವ್ಯಾಪ್ತಿಯ ದನ್ನಕ್ಕಿಹಾರ ಗ್ರಾಮದಲ್ಲಿ 50ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಮುದಾಯಭವನವನ್ನು ಶಾಸಕಿ ನಯನಾ ಮೋಟಮ್ಮ ಉಧ್ಘಾಟಿಸಿದರು.ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಗಬ್ಗಲ್ ಗ್ರಾ.ಪಂ.ನ ಕಾಂಗ್ರೆಸ್ ಮುಖಂಡ ಪ್ರಸನ್ನಸಾಲ್ದಾನ ಅವರ ಮನೆಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಬಾಳೂರು ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಜಿ.ಶ್ರೀನಾಥ್, ಕಾರ್ಯದರ್ಶಿ ಉಪೇಂದ್ರ, ಪ.ಜಾತಿ ಘಟಕದ ಅಧ್ಯಕ್ಷ ಚಂದ್ರು, ಮುಖಂಡರಾದ ಮಹೇಶ್, ನವೀನ್ ಮತ್ತಿತರರಿದ್ದರು.
——————-ವಿಜಯಕುಮಾರ್, ಮೂಡಿಗೆರೆ