ಮೂಡಿಗೆರೆ:ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಸದಸ್ಯರ ಆರೋಪ ಸತ್ಯಕ್ಕೆ ದೂರವಾಗಿದೆ.ನಾವು ಆಧಿಕಾರಕ್ಕೆ ಬಂದ ನಂತರ ಪಾರದರ್ಶಕ ಆಡಳಿತವನ್ನು ನೀಡಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಸೋಮವಾರ ಪ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಹಿಂದಿನ ನಡಾವಳಿಯನ್ನು ಓದಿ ಹೇಳುವಂತೆ ಕೇಳಿಕೊಂಡಾಗ ಸಭೆಯ ಅಜೆಂಡಾದ ಪ್ರಕಾರ ಸದಸ್ಯರ ಮುಂದೆ ಹಿಂದಿನ ಸಭೆಯ ನಡಾವಳಿಯನ್ನು ಓದಿ ದಾಖಲಿಸಲಾಗಿದೆ. ಅದರ ಅನುಪಾಲನಾ ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.
ಹಿಂದೆ ಆಡಳಿತಾಧಿಕಾರಿ ನಡೆಸಿದ್ದ ಸಭೆಗಳ ನಡಾವಳಿಯನ್ನು ಓದುವ ಬಗ್ಗೆ ಕೇಳಿದಾಗ ಅದು ಆ ದಿನದ ಸಭೆಯ ಅಜೆಂಡಾದಲ್ಲಿಲ್ಲದ ಕಾರಣ ಅದನ್ನು ಓದಲಿಲ್ಲ.ಇದರಿಂಧ ಸಭೆಯ ನಿಯಮಾವಳಿ ಉಲ್ಲಂಘನೆಯಾಗಿರುವುದಿಲ್ಲ.ಸಭೆಯಲ್ಲಿ ವಿರೋಧಪಕ್ಷದ ಸದಸ್ಯರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ನೀಡಿದ್ದರೂ ಕೂಡಾ ಇಬ್ಬರು ಬಿಜೆಪಿ ಸದಸ್ಯರು ಸಭೆಯಲ್ಲಿ ಧರಣಿ ಕುಳಿತಿದ್ದಾರೆ. ಊಟದ ನಂತರ ಮತ್ತೆ ಸಭೆ ಆರಂಭಿಸಲು ಮುಂದಾದಾಗಲೂ ಧರಣಿ ಕುಳಿತ ಆ ಇಬ್ಬರು ಸದಸ್ಯರು ಊಟ ಮಾಡದೆ ಧರಣಿ ಮುಂದುವರಿಸಿದ್ದಾರೆ.
ಸಭೆ ಮುಗಿದು ಎಲ್ಲಾ ಸದಸ್ಯರೂ ಹೊರಹೋದ ಬಳಿಕವೂ ಧರಣಿ ನಿರತ ಸದಸ್ಯರು ಸಭಾಂಗಣದಿoದ ಹೊರ ಹೋಗಿ ಕಛೇರಿ ಆವರಣದಲ್ಲಿ ಧರಣಿ ಮುಂದುವರಿಸಿದ್ದಾರೆ.ಅವರು ಹಿಂದೆ ಪ.ಪಂ.ಆಡಳಿತಾಧಿಕಾರಿ ಅವಧಿಯಲ್ಲಿ ನಡೆದಿದ್ದ ನಿರ್ಣಯಕ್ಕೆ ಸಂಭoದಪಟ್ಟoತೆ ಧರಣಿ ನಡೆಸಿದ್ದಾರೆಯೇ ಹೊರತು ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಧರಣಿ ನಡೆಸಿದ್ದಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೈದು ತಿಂಗಳಲ್ಲಿ ಸಾರ್ವಜನಿಕರು ಈ ಸ್ವತ್ತಿಗಾಗಿ ನೀಡಿದ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿರುವ 2 ಕುಡಿಯುವ ನೀರಿನ ಘಟಕಗಳನ್ನು ಶುದ್ದೀಕರಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.ಕಿತ್ತಲೆಗಂಡಿ ನೀರಿನ ಘಟಕದಿಂದ ಎಕ್ಸ್ಪ್ರಸ್ ಲೈನ್ ಮೂಲಕ ಪಟ್ಟಣಕ್ಕೆ ನೀರು ಪೂರೈಸುವ ಸಿದ್ದತೆ ನಡೆದಿದೆ.ಪಟ್ಟಣದ ಎಲ್ಲ ಬಡಾವಣೆಗಳಿಂದಲೂ ದಿನನಿತ್ಯ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.ಪ.ಪಂ.ಗೆ 14 ನೀರುಗಂಟಿಗಳನ್ನು ನೇಮಿಸಲಾಗಿದ್ದು ಅವರ ನೇಮಕಾತಿಗೆ ಜಿಲ್ಲಾಧಿಕಾರಿಯವರ ಅನುಮೋದನೆ ಪಡೆಯಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ದಿಗೆ ವಿವಿಧ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಎಲ್ಲ ಸದಸ್ಯರು ಒಗ್ಗಟ್ಟಿನಿಂದ ನಗರ ಅಭಿವೃದ್ದಿಪಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
———ವಿಜಯಕುಮಾರ್.ಟಿ.ಮೂಡಿಗೆರೆ