
ಮೂಡಿಗೆರೆ-ಮಹೇಂದ್ರ ಕುಮಾರ್ ಗುರೂಜಿ ಎಂದೇ ಪ್ರಖ್ಯಾತರಾಗಿದ್ದ ಮಹೇಂದ್ರ ಕುಮಾರ್ ರವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಪಲ್ಗುಣಿ ಜಾಬ್ಸ್ ಎಂಬ ಸಂಸ್ಥೆಯೊಂದನ್ನು ನಡೆಸುತ್ತಿದ್ದ ಮಹೇಂದ್ರ ಕುಮಾರ್ ರವರು ತಾಲೂಕಿನ ಪಲ್ಗುಣಿ ಗ್ರಾಮದವರು ಅವರಿಗೆ ಸುಮಾರು 52 ವರ್ಷ ವಯಸ್ಸಾಗಿತ್ತು.
ಕರ್ನಾಟಕ ಮತದಾರರ ಜಾಗ್ರತಿ ವೇದಿಕೆ ಎಂಬ ಸಂಘಟನೆಯೊಂದನ್ನು ಕಟ್ಟಿ ಆ ಮೂಲಕ ಮತದಾನದ ಮಹತ್ವದ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಮಹೇಂದ್ರ ಕುಮಾರ್ ಮಾಡುತ್ತಿದ್ದರು.

ಅತ್ಯಂತ ಸಜ್ಜನ ವ್ಯಕ್ತಿತ್ವದ ಮಹೇಂದ್ರ ಕುಮಾರ್ ರವರು ಮೂಡಿಗೆರೆ ತಾಲೂಕಿನ ಯುವಕರ ಪಾಲಿನ ಕಣ್ಮಣಿ ಯಾಗಿದ್ದರು.ಪಲ್ಗುಣಿ ಒಕ್ಕೂಟ ಎಂಬ ವಾಟ್ಸ್ ಆಪ್ ಗುಂಪನ್ನು ಪ್ರಾರಂಭಿಸಿ ಅದರಲ್ಲಿ ಯುವಕ-ಯುವತಿಯರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆಗೆ ಶ್ರಮ ಪಡುವ ಅಗತ್ಯತೆಯನ್ನು ಒತ್ತಿ ಹೇಳುತ್ತಿದ್ದರು.
ಇಂದಿನ ಯುವ ಪೀಳಿಗೆ ಸೋಮಾರಿಗಳಾಗದೆ ಸಮಯದ ಸರಿಯಾದ ಉಪಯೋಗದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಪ್ರತಿದಿನ ಸಲಹೆ ಸೂಚನೆಗಳನ್ನು ನೀಡುತ್ತಾ ಯುವಕರ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದರು.

ಬೆಂಗಳೂರಿನಲ್ಲಿ ವಾಸವಿದ್ದ ಮಹೇಂದ್ರ ಕುಮಾರ್ ರವರು ಕಳೆದೆರಡು ದಿನಗಳ ಹಿಂದಷ್ಟೇ ಪಲ್ಗುಣಿ ಗ್ರಾಮಕ್ಕೆ ಬಂದಿದ್ದು,ತನ್ನ ಅಭಿಮಾನಿಗಳನ್ನು ಭೇಟಿ ಮಾಡಿ ಸಂತೋಷದಿಂದ ಕಾಲ ಕಳೆದಿದ್ದರು.
ಇಂದು ಬೆಳಗಿನ ಜಾವ ಅವರಿಗೆ ಮನೆಯಲ್ಲಿಯೇ ಹೃದಯಾಘಾತವಾಗಿದ್ದು ಸ್ನೇಹಿತರು ಅವರನ್ನು ಮೂಡಿಗೆರೆಯ ಆಸ್ಪತ್ರೆಗೆ ಒಯ್ದರಾದರು ಅಷ್ಟರ ಒಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.