ಮೂಡಿಗೆರೆ:ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದರೂ ಇದುವರೆಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಪ್ರತಿಷ್ಟಾಪಿಸಲು ಸರ್ಕಾರ ಮುಂದಾಗಿಲ್ಲ.ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಜಾಗ ಮೀಸಲಿಡದಿರುವುದು ಸರ್ಕಾರ ಅವರಿಗೆ ಮಾಡಿದ ಅವಮಾನವಾಗಿದೆ. ಈ ಬಾರಿ ಸಹಿಸಿ ಸುಮ್ಮನಾಗುವ ಪ್ರಶ್ನೆಯೇ ಇಲ್ಲ. ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಖಾಲಿ ಜಾಗದಲ್ಲಿ ಪುತ್ಥಳಿ ಪ್ರತಿಷ್ಟಾಪನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮತ್ತು ಪ.ಪಂ.ಗೆ ಪರಿಶಿಷ್ಟ ಜಾತಿ, ಪಂಗಡ ಹಿತರಕ್ಷಣಾ ಒಕ್ಕೂಟದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನಂತರ ಒಕ್ಕೂಟದ ಪದಾಧಿಕಾರಿ ಲೋಕವಳ್ಳಿ ರಮೇಶ್ ಮಾತನಾಡಿ, ಸೂಕ್ತ ಸ್ಥಳದಲ್ಲಿ ಡಾ. ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು 2022ರ ಜು.30ರಂದು ಪ.ಪಂ.ಸಾಮಾನ್ಯ ಸಭೆಯಲ್ಲಿ ಮತ್ತು 2023ರ ಜೂ.13 ರಂದು ತಾ.ಪಂ.ಸಭಾoಗಣದಲ್ಲಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಕುಂದುಕೊರತೆ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾದಾಗ,ಪುತ್ಥಳಿ ನಿರ್ಮಾಣಕ್ಕೆ ತಾಲೂಕು ಕಛೇರಿಯ ಆವರಣದಲ್ಲಿ ಸೂಕ್ತ ಜಾಗವಿದೆ ಎಂಬ ವಿಷಯ ಚರ್ಚೆಯಾಗಿ ಅಲ್ಲಿ ಪ್ರತಿಷ್ಟಾಪಿಸಲು ನಿರ್ಣಯ ಕೈಗೊಳ್ಳಲಾಗಿತ್ತು.2 ಕಡೆ ಕೈಗೊಂಡ ನಿರ್ಣಯಗಳು ನೆನೆಗುದಿಗೆ ಬಿದ್ದ ಕಾರಣ ಬಸ್ ನಿಲ್ದಾಣದ ಮುಂದೆ ಜಾಗ ಖಾಲಿ ಇದ್ದ ಕಾರಣ ಅಲ್ಲಿ ಪುತ್ಥಳಿ ಪ್ರತಿಷ್ಟಾಪಿಸಲಾಗಿತ್ತು.
ಆಗ ಅಧಿಕಾರಿಗಳು ಸೂಕ್ತ ಜಾಗ ನೀಡುವ ಭರವಸೆ ನೀಡಿ ತೆರೆವುಗೊಳಿಸುವಂತೆ ಮನವಿ ಮಾಡಿದ್ದರಿಂದ ಪುತ್ಥಳಿಯನ್ನು ತೆರೆವುಗೊಳಿಸಲಾಗಿದೆ. ಅಂಬೇಡ್ಕರ್ ಭವನ ನಿರ್ಮಿಸಲು ಕಳೆದ 15 ವರ್ಷದಿಂದ ಜಾಗ ಗುರುತಿಸಲು ಹರಸಾಹಸ ಪಡುತ್ತಿದ್ದೇವೆ.ಈವರೆಗೆ ತಾಲೂಕು ಆಡಳಿತ ಜಾಗ ನೀಡಿಲ್ಲ. ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪನೆಗೆ ಕೂಡಲೇ ಜಾಗ ಗುರುತಿಸಬೇಕು.ಅಧಿಕಾರಿಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಜಾಗ ಗುರುತಿಸಿಕೊಡದಿದ್ದರೆ ಮುಂದಿನ ಎಲ್ಲಾ ಆಗುಹೋಗುಗಳಿಗೂ ತಾಲೂಕು ಆಡಳಿತ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲೇ ಸುಪ್ರಸಿದ್ದ ಸ್ಥಾನ ಪಡೆದಿದ್ದಾರೆ. ಅಂತಹ ಮಹನೀಯರ ಪುತ್ಥಳಿ ಪ್ರತಿಷ್ಟಾಪಿಸಲು ಜಾಗದ ಕೊರತೆ ಎದುರಾಗಬಾರದು. ತಾಲೂಕು ಆಡಳಿತ ಅಥವಾ ಪ.ಪಂ.ನಿoದ ಕೂಡಲೇ ಜಾಗ ನೀಡಬೇಕು. ಜಾಗ ಗುರುತಿಸಿದ ಕೂಡಲೇ ತಾಲೂಕಿನ ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಪುತ್ಥಳಿ ಪ್ರತಿಷ್ಟಾ ಪನೆಗೆ ಮುಂದಾಗುವುದಾಗಿ ತಿಳಿಸಿದರು.
ಈ ವೇಳೆ ಪ.ಜಾ.ಪಂಗಡ ಹಿತರಕ್ಷಣಾ ಒಕ್ಕೂಟದ ತಾಲೂಕು ಅಧ್ಯಕ್ಷ ದೇಜಪ್ಪ, ಪ.ಪಂ.ಉಪಾಧ್ಯಕ್ಷ ಹೊಸ್ಕೆರೆ ರಮೇಶ್,
ಮುಖಂಡರಾದ ಸಿದ್ದೇಶ್,ಶಿವು, ರಘು ಕಡಿದಾಲ್, ಬಿ.ಎಂ.ಶoಕರ್, ಬಕ್ಕಿ ಕುಮಾರ್, ಅಭಿಜಿತ್, ಗಣೇಶ್ ಮತ್ತಿತರರಿದ್ದರು.
ಒಂದು ಮಾತು..
ಡಾ. ಬಿ. ಆರ್ ಅಂಬೇಡ್ಕರ್ ಈ ದೇಶದ ಪರಮ ಆಸ್ತಿ.ಅವರ ಪ್ರತಿಮೆಯನ್ನು ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಷ್ಠಾಪಿಸ ಬೇಕ್ಕಾದ್ದು ಆಡಳಿತಗಳ ಕರ್ತವ್ಯ ಎಂದರು ತಪ್ಪಾಗಲಾರದು.ಆದರೆ ಇಂದು ಸಂವಿದಾನ ಶಿಲ್ಪಿಯ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಎಂದು ಆಗ್ರಹಿಸುವ ಪರಿಸ್ಥಿತಿ ಇರುವುದು ಅವರಿಗೆ ಈ ದೇಶ ಮಾಡುವ ಬಹುದೊಡ್ಡ ಅವಮಾನ ಎಂದೇ ಭಾವಿಸಬಹುದು.
ತಾಲೂಕು ಆಡಳಿತ ಈ ಘಟನೆಯನ್ನು ದೊಡ್ಡದಾಗಲು ಬಿಡದೆ ಶೀಘ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
………….ವರದಿ:ವಿಜಯಕುಮಾರ್.ಟಿ.ಮೂಡಿಗೆರೆ.