ಮೂಡಿಗೆರೆ:ಜಾತಿ, ಧರ್ಮ,ಮೇಲು,ಕೀಳು ಬೇಧವಿಲ್ಲದೆ ಎಲ್ಲರೂ ಗೌರವ ಹಾಗೂ ಸಾಮರಸ್ಯವಾಗಿ ಬದುಕುವ ಸಮಾಜ ನಿರ್ಮಾಣ ವಾಗಬೇಕೆಂದು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಅರ್ಚಕ ಮಹಾಬಲ ಕಾರಂತ್ ಹೇಳಿದರು.
ಅವರು ಬುಧವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯ, ನ್ಯಾಯ,ನಿಷ್ಠೆ ಕಾಪಾಡಲು ಹೋರಾಟ ನಡೆಸುವ ಕಾಲಘಟ್ಟ ಇದಾಗಿದೆ.ಹಾಗಾಗಿ ಪರರನ್ನು ಪ್ರೀತಿ ಭಾವನೆಯಿಂದ ಕಾಣುವ ಮೂಲಕ ಜೀವನ ಸಾಗಿಸಿದರೆ ಮಾತ್ರ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮೂಡಿಗೆರೆ ಸಂತ ಅಂತೋಣಿ ದೇವಾಲಯದ ಧಾರ್ಮಿಕ ಗುರು ಸುನೀಲ್ ರೋಡ್ರಿಗಸ್ ಮಾತನಾಡಿ, ಈ ಜಗತ್ತಿಗೆ ಬೇಕಾಗಿರುವುದು ಪ್ರೀತಿ. ಅದನ್ನೆ ಎಲ್ಲಾ ಧರ್ಮಗಳು ಹೇಳುತ್ತದೆ. ನಿಜವಾಗಿಯೂ ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಅರಿತುಕೊಂಡರೆ ಯಾರಲ್ಲೂ ಕೂಡ ಕೋಮು ಭಾವನೆ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಚಕಮಕ್ಕಿ ಮಸೀದಿಯ ಧಾರ್ಮಿಕ ಗುರು ಸಿನಾನ್ ಫೈಝಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಧರ್ಮ ಗೌರವಿಸುವ ಜೊತೆಗೆ ಎಲ್ಲಾ ಧರ್ಮವನ್ನು ಪ್ರೀತಿಸಬೇಕೆಂದು ಪ್ರವಾದಿ ಮಹಮ್ಮದ್ ಅವರು ಹೇಳಿದ ಮಾತುಗಳನ್ನು ಮಹಾತ್ಮ ಗಾಂಧೀಜಿ ಕೂಡ ಹೇಳಿದ್ದಾರೆ. ಈ ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಅಂತ್ಯ ಇದೆ ಎಂಬುದು ಯಾರಿಗೂ ತಿಳಿಯದ ವಿಚಾರವಲ್ಲ. ಸ್ವಾರ್ಥ ಬದುಕಿಗಾಗಿ ಇತರರಿಗೆ ತೊಂದರೆ ನೀಡುವುದನ್ನು ಬಿಟ್ಟು ಪರಸ್ಪರ ಸಹಬಾಳ್ವೆಯಿಂದ ಬದುಕಿದಲ್ಲಿ ಸ್ವರ್ಗ ಇಲ್ಲೇ ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್,ರಾಜಶೇಖರ್ ಮೂರ್ತಿ ವಹಿಸಿದ್ದರು. ತಾ.ಪಂ. ಇಒ ದಯಾವತಿ, ಬಿಇಒ
ಹೇಮಂತಚAದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
——-ವಿಜಯಕುಮಾರ್.ಟಿ.ಮೂಡಿಗೆರೆ