ಮೂಡಿಗೆರೆ:ನಿಯಮ ಪಾಲಿಸದ ಐಸಿರಿ ಬಡಾವಣೆ ಮಾಲೀಕರು-ಪರವಾನಿಗೆ ರದ್ದತಿಗೆ ಎಸ್‌ಡಿಪಿಐ ಆಗ್ರಹ

ಮೂಡಿಗೆರೆ:ಪಟ್ಟಣದ ಗಂಗನಮಕ್ಕಿ ಎಂಬಲ್ಲಿ ಹೊಸತಾಗಿ ನಿರ್ಮಾಣವಾಗಿರುವ ಐಸಿರಿ ಎಂಬ ಹೆಸರಿನ ಹೊಸ ಬಡಾವಣೆಗೆ ಅನುಮಿತಿ ಪಡೆಯಲು ಯಾವುದೇ ಪ್ರಯೋಜನಕ್ಕೆ ಬಾರದ ಹೊಂಡದ ಜಾಗವನ್ನು ಪಾರ್ಕ್ ನಿರ್ಮಿಸಲು ಬಿಟ್ಟಿರುವುದಾಗಿ ತೋರಿಸಿ ಅನುಮತಿ ಪಡೆದ ಬಳಿಕ ಆ ಜಾಗದಲ್ಲಿ ಪಾರ್ಕ್ ನಿರ್ಮಿಸದೆ ಜಾಗದ ಮಾಲಿಕರು ವಂಚಿಸಿದ್ದಾರೆ.ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಪಕ್ಷದಿಂದ ಹಳೇಮೂಡಿಗೆರೆ ಗ್ರಾ.ಪಂ.ಪಿಡಿಒ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಮಾತನಾಡಿ,ಹೊಸತಾಗಿ ಬಡಾವಣೆ ನಿರ್ಮಿಸುವಾಗ ಶಾಲೆ, ಆಸ್ಪತ್ರೆ, ದೇವಸ್ಥಾನ,ಮಸೀದಿ, ಚರ್ಚ್, ಪಾರ್ಕ್ ಮತ್ತಿತರೆ ಉದ್ದೇಶಕ್ಕೆ ಬೇಕಾದ ಜಾಗವನ್ನು ಬಿಟ್ಟು ಉಳಿದ ಜಾಗಕ್ಕೆ ಬಡಾವಣೆಯ ಅನುಮತಿ ಪಡೆಯಬೇಕು. ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟ ಜಾಗವನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಬೇಕು. ನಂತರ ಬಡಾವಣೆಗೆ ಅನುಮತಿ ನೀಡಲಾಗುತ್ತದೆ. ಆದರೆ ಗಂಗನಮಕ್ಕಿ ಎಂಬಲ್ಲಿ ಶ್ರೀಮoತರೊಬ್ಬರು ನಿರ್ಮಿಸಿರುವ ಐಸಿರಿ ಎಂಬ ಬಡಾವಣೆಗೆ ಗ್ರಾ.ಪಂ.ನಿoದ ಅನುಮತಿ ಪಡೆಯುವಾಗ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟಿರುವುದಿಲ್ಲ. ಪಾರ್ಕಿಗೆಂದು ಬಿಟ್ಟಿರುವ ಜಾಗ 25ಅಡಿಯಷ್ಟು ಆಳವಿರುವ ಬೃಹತ್ ಹೊಂಡವಾಗಿದೆ. ಆ ಹೊಂಡದಲ್ಲಿ ಕೊಳಚೆ ನೀರು ಹರಿದು ಚರಂಡಿ ನಿರ್ಮಾಣವಾಗಿದೆ. ಹೊಂಡಕ್ಕೆ ಈ ಹಿಂದೆ ತಡೆಗೋಡೆ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಾದ್ದರಿಂದ ಕಳೆದ ವರ್ಷದ ಮಳೆಗೆ ತಡೆಗೋಡೆ ಕುಸಿದು ಬಿದ್ದಿದೆ. ಹೊಂಡದ ಪಕ್ಕದಲ್ಲಿನ 2 ನಿವೇಶನಗಳು ಕುಸಿದಿದೆ.ಅಧಿಕಾರಿಗಳು ಆ ಜಾಗವನ್ನು ಪರಿಶೀಲಿಸಿ ಬಡಾವಣೆಗೆ ನೀಡಿರುವ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಕೆ ವೇಳೆ ಮುಖಂಡರಾದ ಸಂತೋಷ್, ಕೆ.ಪಿ.ಖಾಲಿದ್,ಪಿ.ಕೆ.ಹನೀಫ್, ಇಲ್ಯಾಸ್, ಮನೋಹರ್, ಬಡಾವಣೆ ನಿವಾಸಿಗಳಾದ ಮೆಕಾನಿಕ್ ಮಂಜು, ಜರಿನಾ ಬಾನು,ಲಕ್ಷ್ಮಣಗೌಡ , ತಸ್ಲಿಮಾ, ಇಬ್ರಾಹಿಂ ಮತ್ತಿತರರಿದ್ದರು.

……… ವರದಿ: ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?