ಮೂಡಿಗೆರೆ:ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಮಂಗಳವಾರ ಮೂಡಿಗೆರೆ ಮತ್ತು ಕಳಸ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಅನುದಾನ ಮಂಜೂರಾಗದೆ ಮುಂಗಡ ಕಾಮಗಾರಿ ನಡೆಸುವ ಮೊದಲು ನನ್ನ ಗಮನಕ್ಕೆ ತರಬೇಕು. ಅಲ್ಲದೆ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಿದರೆ ಅಂತಹ ಕಾಮಗಾರಿಗಳ ಮಂಜೂರಾತಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕೆಲವಡೆ ಮುಂಗಡ ಕಾಮಗಾರಿ ನಡೆದಿರುವ ಮಾಹಿತಿಯಿದೆ. ಅಧಿಕಾರಿಗಳು ಶಾಸಕರ ಗಮನಕ್ಕೆ ತಾರದೇ ಕಾಮಗಾರಿ ನಡೆಸಿ ನಂತರ ಮoಜೂರಾತಿಗೆ ಪ್ರಯತ್ನಿಸಿದ್ದು ಗಮನಕ್ಕೆ ಬಂದಿದೆ. ಅಂತಹ ಮುoಗಡ ಕಾಮಗಾರಿಯ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ತಿಳಿಸಿದರು.
2ತಿಂಗಳ ಹಿಂದೆ ಎಂಜಿಎo ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಮರಣಹೊಂದಿದ್ದರು. ಮತ್ತೆ ಇಂತಹ ಪ್ರಕರಣ ಮರುಕಳಿಸಬಾರದು. ಶಾಸಕಿಯಾದಾಗಿನಿಂದಲೂ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಅವಿರತ ಪ್ರಯತ್ನ ಪಟ್ಟಿದ್ದೇನೆ. ಆದರೆ ಈಗಲೂ ಕೂಡಾ ಸಾರ್ವಜನಿಕರಿಂದ ಆಸ್ಪತ್ರೆಯ ವಿರುದ್ದ ದೂರು ಕೇಳಿಬರುತ್ತಿದೆ. ಹಾಗಾದರೆ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಏನುಮಾಡುತ್ತಿದ್ದಾರೆ? ರಾತ್ರಿ ಪಾಳಿಯ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ದೂರು ಬರದಂತೆ ನೋಡಿಕೊಳ್ಳಬೇಕು. ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹವರನ್ನು ಅಮಾನತ್ತು ಪಡಿಸಲು ಶಿಫಾರಸ್ಸು ಮಾಡುತ್ತೇನೆ ಎಂದು ಎಚ್ಚರಿಸಿದರು.
ಆಸ್ಪತ್ರೆ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಬಳಿಕ ಎಂಜಿಎo ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕ ಮಾತನಾಡಿ, ಆಸ್ಪತ್ರೆಯಲ್ಲಿ 9 ಮಂದಿ ವೈಧ್ಯಾಧಿಕಾರಿಗಳಿದ್ದಾರೆ. ಹೆರಿಗೆ ವಿಭಾಗದಲ್ಲಿ ಇಬ್ಬರು ವೈದ್ಯರಿದ್ದಾರೆ, ಅನೆಸ್ತೇಶಿಯನ್ ವೈದ್ಯರು ಒಬ್ಬರೇ ಇದ್ದಾರೆ. ಸರ್ಜನ್ ಹುದ್ದೆ ಖಾಲಿಯಿದೆ. ಎಲ್ಲಾ ವಿಭಾಗಗಳಿಗೂ ಇಬ್ಬರು ವೈದ್ಯರ ಅಗತ್ಯವಿದೆ. ಕಳೆದ ತಿಂಗಳಲ್ಲಿ 25441 ಮಂದಿ ಹೊರರೋಗಿಗಳು, 1285 ಮಂದಿ ಒಳರೋಗಿಗಳು ಮತ್ತು ತುರ್ತು ವಿಭಾಗದಲ್ಲಿ 4347 ಮಂದಿ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 147 ಮಹಿಳೆಯರಿಗೆ ಸಹಜ ಮತ್ತು 40 ಮಂದಿಗೆ ಸಿಸೇರಿಯನ್ ಹೆರಿಗೆ ನಡೆದಿದೆ. ಎಲ್ಲಾ ತಾಯಿಮಗು ಆರೋಗ್ಯದಿಂದಿದ್ದಾರೆ. ಡಯಾಲಿಸಿಸ್‌ಗಾಗಿ ಈಗ 3 ಯಂತ್ರಗಳಿದ್ದು ಇನ್ನೂ ಒಂದು ಯಂತ್ರವನ್ನು ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್‌ಬಾಬು ಮಾತನಾಡಿ, ಗೃಹ ಆರೋಗ್ಯ ಯೋಜನೆಗೆ ಸಧ್ಯದಲ್ಲೇ ಚಾಲನೆ ನೀಡಲಾಗುವುದು. ಈ ಯೋಜನೆಯಡಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವೈದ್ಯರು ಹಾಗೂ ಸಿಬ್ಬಂದಿ ಕನಿಷ್ಟ 30 ಮನೆಗಳಿಗೆ ಭೇಟಿ ಮಾಡಿ, 30 ವರ್ಷ ಮೇಲ್ಪಟ್ಟಿರುವ ಪುರುಷರಿಗೆ ಬಿಪಿ, ಶುಗರ್ ಜತೆಗೆ ಓರಲ್ ಕ್ಯಾನ್ಸರ್, ಮಹಿಳೆಯ ರಿಗೆ ಗರ್ಭಕೋಶ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ತಪಾಸಣೆ ನಡೆಸಲಾಗುವುದು. ರೋಗ ಕಂಡು ಬoದವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರಕಿಸುವ ಸೌಲಭ್ಯ ಒದಗಿಸಲಾಗುವುದು. ಸುಂಕಸಾಲೆ ಪಿಹೆಚ್‌ಸಿಯಲ್ಲಿನ ವೈಧ್ಯಾಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಿಡುವಾಳೆ, ಕಳಸ ಬಾಳೆಹೊಳೆ ಮತ್ತು ಬೆಟ್ಟಗೆರೆಯಲ್ಲಿ ವೈದ್ಯರ ಕೊರತೆಯಿದೆ ಎಂದು ತಿಳಿಸಿದಾಗ ವೈದ್ಯರ ಕೊರತೆಯಿರುವ ಕಡೆ ಹುದ್ದೆಗಳನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ಸೂಚಿಸಿದರು.
ಮೂಡಿಗೆರೆ ಮತ್ತು ಕಳಸ ತಾಲೂಕಿನ ಕೆಲ ರಸ್ತೆಗಳಲ್ಲಿ ಬಹಳ ಗುಂಡಿಬಿದ್ದಿದೆ. ಪಿಡಬ್ಲುಡಿ ಅಧಿಕಾರಿಗಳು ಏನು ಮಾಡುತ್ತಿದ್ದೀರಿ, ಎಲ್ಲವುದಕ್ಕೂ ಶಾಸಕರೇ ಮಧ್ಯಸ್ತಿಕೆ ವಹಿಸಬೇಕಾ? ಅಧಿಕಾರಿಗಳು ಇರುವುದಾದರೂ ಏಕೆ, ಕಳಸದಿಂದ ಮಂಗಳೂರಿಗೆ ನಾನು ಪ್ರಯಾಣಿಸುವಾಗ ರಸ್ತೆಯನ್ನು ಖುದ್ದಾಗಿ ನೋಡಿದ್ದೇನೆ. ರಸ್ತೆ ಸಂಪೂರ್ಣ ಗುಂಡಿಯಾಗಿದ್ದರೂ ಅದನ್ನು ಮುಚ್ಚಿರುವುದಿಲ್ಲ. ಕೂಡಲೇ ಆ ರಸ್ತೆಯ ಎಲ್ಲಾ ಗುಂಡಿಯನ್ನು ಮುಚ್ಚಲು ಕ್ರಮವಹಿಸಬೇಕು ಎಂದು ತಾಕೀತು ನೀಡಿದರು.
ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಬಳಿಕ ಶಾಸಕಿ ನಯನಾ ಮೋಟಮ್ಮ , ಕೆಡಿಪಿ ಸಭೆಯಲ್ಲಿ ನಡೆಸಿದ ಎಲ್ಲಾ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಪರಿಹರಿಸಿರಬೇಕು. ಶಿಶು ಮರಣ ಸಂಪೂರ್ಣವಾಗಿ ಕಡಿಮೆ ಮಾಡುವಂತೆ ಎಚ್ಚರ ವಹಿಸಬೇಕು. ಎಲ್ಲಾ ತಾಲೂಕು ಹೋಲಿಕೆ ಮಾಡಿದರೆ ಇಲ್ಲಿ ವೈದ್ಯರ ಸಮಸ್ಯೆ ಇಲ್ಲ. ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಂದ ಯಾವುದೇ ದೂರು ಬಾರದಂತೆ ಎಚ್ಚರವಹಿಸಬೇಕು. ಮೆಸ್ಕಾಂ ಅಧಿಕಾರಿಗಳು ಮಳೆ ಪ್ರಾರಂಭಗೊಳ್ಳುವ ಮುನ್ನ ಲೈನ್‌ಗೆ ತಗುಲುವ ಎಲ್ಲಾ ಜಂಗಲ್ ಕಟಾವು ಬಗ್ಗೆ ಗಮನಹರಿಸಬೇಕು. ಲೈನ್ ಶಿಫ್ಟಿಂಗ್ ಅರ್ಜಿಗಳನ್ನು ಕೂಡಲೇ ವಿಲೆ ಮಾಡಬೇಕು. ಇದಕ್ಕೆ ಅರಣ್ಯ ಇಲಾಖೆ ಸಹಕರಿ ಸಬೇಕು. ರಸ್ತೆ, ಕುಡಿಯುವ ನೀರು ಸೇರಿದಂತೆ ಜನರ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ಸಲಕರಣೆ ವಿತರಣೆ ಮಾಡಲಾಯಿತು.
ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಕಳಸ ತಹಸೀಲ್ದಾರ್ ಶಾರದ, ತಾ.ಪಂ.ಈ.ಓ ದಯಾವತಿ, ಚಿಕ್ಕಮಗಳೂರು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿ.ಎಂ.ಮಹೇಶ್‌ಕುಮಾರ್, ಕೆಡಿಪಿ ಸದಸ್ಯರುಗಳಾದ ಸುರೇಂದ್ರ ಉಗ್ಗೇಹಳ್ಳಿ, ಸಂಪತ್ ಬಿಳಗುಳ, ಅಬ್ದುಲ್ ಶುಕೂರ್, ಪ್ರವೀಣ್, ಉದಯಕುಮಾರ್, ಸಂಪತ್ ಕುಮಾರ್,ಕುನ್ನಹಳ್ಳಿ ರವಿ, ರಫೀಕ್ ಕಳಸ, ಪೀಠರ್ ಲಾರೆನ್ಸ್ ಡಿಸೋಜಾ,ಬಾಳೂರು, ಎಂ.ಎನ್.ಅಶ್ವಥ್, ಸರಸ್ವತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.
………….ವರದಿ:ವಿಜಯಕುಮಾರ್.ಟಿ.ಮೂಡಿಗೆರೆ.