ಮೂಡಿಗೆರೆ-ಮುಗಿಯದ’ಕಿರಗುಂದ ಶಾಲೆಯ ಕಿರಿ-ಕಿರಿ’-ವರ್ಗಾವಣೆ ಆದೇಶಕ್ಕೂ’ರಾಜಕೀಯ’-ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಿರಲು ನಿರ್ಧಾರ

ಮೂಡಿಗೆರೆ- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಎದುರು ನಿರಂತರವಾಗಿ ಜಗಳವಾಡಿಕೊಂಡು ಪಾಠ ಪ್ರವಚನ ಮಾಡದೆ ಕರ್ತವ್ಯ ಲೋಪವೆಸಗುತ್ತಿರುವ ಮೂವರು ಶಿಕ್ಷಕಿಯರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜ್ ಅವರು ಅಮಾನತುಗೊಳಿಸಿ ಆದೇಶ ಮಾಡಿದ್ದರು ಸಹ ರಾಜಕೀಯ ಒತ್ತಡದಿಂದ ಡಿಡಿಪಿಐ ಅವರ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಕಿರುಗುಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಎದುರು ನಿರಂತರವಾಗಿ ಪರಸ್ಪರ ಜಗಳವಾಡಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿಲ್ಲ ಎಂದು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದರು. ಹಿಂದೆ ಈ ಶಾಲೆಯಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈಗ 34 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಮೂವರು ಶಿಕ್ಷಕಿಯರು ಹಾಗೂ ಓರ್ವ ಅತಿಥಿ ಶಿಕ್ಷಕಿ ಶಾಲೆಯಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಮುಖ್ಯ ಶಿಕ್ಷಕಿ ಶಾಲೆಯ ಬಿಸಿಯೂಟದ ಧವಸ ಧಾನ್ಯ ಹಾಗೂ ಹಾಲಿನ ಪುಡಿಯನ್ನು ಕದ್ದೊಯ್ಯುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು.

ಜೂನ್ ತಿಂಗಳಿನಿಂದ ಮತ್ತೆ ಅದೇ ಶಾಲೆಗೆ ಬಂದ ಶಿಕ್ಷಕಿ, ಇತರ ಇಬ್ಬರು ಶಿಕ್ಷಕಿಯರೊಂದಿಗೆ ಜಗಳವಾಡಲು ಆರಂಭಿಸಿದ್ದಾರೆ. ಶಾಲೆಯ ಮೂವರು ಶಿಕ್ಷಕಿಯರಿಂದ ಶಾಲೆಯ ವಾತಾವರಣ ಹಾಳಾಗಿದೆ. ಹೀಗೆಯೇ ಮುಂದುವರೆದರೆ ಶಾಲೆ ಮುಚ್ಚುವ ಹಂತಕ್ಕೆ ತಲುಪಲಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಕಿರುಗುಂದ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದು ಶಿಕ್ಷಕಿಯರನ್ನು ಅಮಾನತುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ನಂತರ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಮತ್ತು ಡಿಡಿಪಿಐ ಜಿ.ಕೆ.ಪುಟ್ಟರಾಜ್ ಅವರ ನೇತೃತ್ವದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದಾಗ, ಮೂವರು ಶಿಕ್ಷಕಿಯರು ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿತ್ತು.

ಅಧಿಕಾರಿಗಳು ವಿದ್ಯಾರ್ಥಿಗಳ ಬಳಿ ಮಾತನಾಡಿದಾಗ ವಿದ್ಯಾರ್ಥಿಗಳು ಕೂಡ ಶಿಕ್ಷಕಿಯರು ಪರಸ್ಪರ ಜಗಳ ಮತ್ತು ಪಾಠ ಮಾಡದಿರುವ ಬಗ್ಗೆ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ವರದಿ ತಯಾರಿಸಿಕೊಂಡಿದ್ದ ಅಧಿಕಾರಿಗಳು, ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದು ಸೋಮವಾರ (ನಿನ್ನೆ) ಅಮಾನತು ಆದೇಶ ತಯಾರಿಸಿದ್ದಾರೆ.

ಮಂಗಳವಾರ (ಇಂದು) ಬೆಳಿಗ್ಗೆ ಅಮಾನತ್ತು ಆದೇಶವನ್ನು ಶಾಲೆಗೆ ಕಳಿಸಿ ಮೂವರು ಶಿಕ್ಷಕಿಯರನ್ನು ಶಾಲೆಯಿಂದ ಹೊರಹಾಕಿ ಬೇರೆ ಮೂವರು ಶಿಕ್ಷಕರನ್ನು ನೇಮಿಸಬೇಕಿತ್ತು. ವಿಚಾರಿಸಿದಾಗ ಅಧಿಕಾರಿಗಳು ಅಮಾನತ್ತು ಆದೇಶವನ್ನು ತಡೆಹಿಡಿದಿದ್ದಾರೆ ರಾಜಕೀಯ ಒತ್ತಡವಿದೆ. ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂವರು ಶಿಕ್ಷಕಿಯರನ್ನು ಕೂಡಲೇ ಅಮಾನತುಗೊಳಿಸದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ತೀರ್ಮಾನಕ್ಕೂ ಪೋಷಕರು ಬಂದಿದ್ದಾರೆ. ಎಸ್ ಡಿ ಎಮ್ ಸಿ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

————————––ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?