ಮೂಡಿಗೆರೆ:ಶಾಲೆಯಲ್ಲಿ ಮಕ್ಕಳ ಎದುರೇ ದಿನನಿತ್ಯ ಜಗಳ ಮಾಡಿಕೊಂಡು ಪಾಠ ಮಾಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಕಿರುಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರ ವಿರುದ್ದ ಸಾರ್ವಜನಿಕರು ದೂರು ನೀಡಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಅವರು ಕಳೆದ 28ರಂದು ಶಾಲೆಗೆ ಬೇಟಿ ನೀಡಿ ಶಿಕ್ಷಕಿಯರ ವಿರುದ್ದ ಡಿ.ಡಿ.ಪಿ.ಐ ಅವರಿಗೆ ವರದಿ ಸಲ್ಲಿಸಲಾಗಿತ್ತು.
ಆದರೆ ಅಧಿಕಾರಿಗಳು ಈ ಶಿಕ್ಷಕಿಯರ ಮೇಲೆ ಯಾವುದೇ ಕ್ರಮಕೈಗೊಳ್ಳದ ಕಾರಣ ಕಿರುಗುಂದ ಗ್ರಾಮಸ್ಥರು
ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಗ್ರಾ.ಪಂ. ಕಛೇರಿಯೆದುರು ಜಮಾಯಿಸಿ ಶಿಕ್ಷಕಿಯರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಹರಿಭಾರ್ಗವ ಮಾತನಾಡಿ ಶಿಕ್ಷಕಿಯರು ದಿನನಿತ್ಯವೂ ಮಕ್ಕಳ ಎದುರೇ ಬೈದಾಡುತ್ತಾರೆ.ಇದು ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಅಲ್ಲದೆ ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ.ಈ ಹಿಂದೆ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿಧ್ಯಾರ್ಥಿಗಳಿದ್ದರು.ಶಿಕ್ಷಕಿಯರ ಜಗಳದಿಂದಾಗಿ ಗ್ರಾಮಸ್ಥರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ.
ಶಾಲೆಯಲ್ಲಿ ಈಗ 34 ಮಕ್ಕಳು ಮಾತ್ರ ಇದ್ದಾರೆ.ಈ ಶಿಕ್ಷಕಿಯರೇ ಇಲ್ಲಿ ಮುಂದುವರಿದಲ್ಲಿ ಮುಂದಿನ 2ವರ್ಷದಲ್ಲಿ ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಬಹುದು.ಪ್ರತಿವರ್ಷದಂತೆ ಈ ಬಾರಿಯೂ ಶಾಲೆಯ ರಂಗಮoದಿರದಲ್ಲಿ ಗಣಪತಿ ಪ್ರತಿಷ್ಟಾಪಿಸಲು ಗ್ರಾಮಸ್ಥರು ಮತ್ತು ಗ್ರಾ.ಪಂ.ಸದಸ್ಯರು ಮನವಿ ನೀಡಿದ ಮೇರೆಗೆ ಕಳೆದ ವಾರ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಸಭೆ ಕರೆದು ಗಣಪತಿ ಪ್ರತಿಷ್ಟಾಪನೆಗೆ ಸಭೆಯಲ್ಲಿ ಅನುಮತಿ ನೀಡಲು
ನಿರ್ಧರಿಸಲಾಗಿದೆ.
ಆದರೆ ಮುಖ್ಯಶಿಕ್ಷಕಿ ಕಮಲಮ್ಮ ಎಸ್.ಡಿ.ಎಂ.ಸಿ ತೆಗೆದುಕೊoಡ ನಿರ್ಣಯವನ್ನು ದಾಖಲಿಸದೆ ಸಭೆ ನಡೆಯುತ್ತಿರುವಾಗಲೇ ಹೊರನಡೆದು ಎಸ್.ಡಿ.ಎಂ.ಸಿ ನಡಾವಳಿಯನ್ನು ತಿರಸ್ಕರಿಸಿದ್ದಾರೆ.ಶಾಲೆಗೆ ಬೇಟಿ ನೀಡುವ ಎಸ್.ಡಿ.ಎಂ.ಸಿ ಸದಸ್ಯರಿಗೆ ಮತ್ತು ಪೋಷಕರಿಗೆ ಶಿಕ್ಷಕಿ ಗೌರವ ನೀಡುತ್ತಿಲ್ಲ.
ಶಾಲೆ ಆವರಣಕ್ಕೆ ಬರುವವರ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಾರೆ.ಈ ಶಿಕ್ಷಕಿಯರ ದರ್ಪದಿಂದಾಗಿ ವಿಧ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲ.ಅಧಿಕಾರಿಗಳು ಕೂಡಲೇ ಈ ಶಿಕ್ಷಕಿಯರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥ ಕೆ.ಆರ್.ಲೋಕೇಶ್ ಮಾತನಾಡಿ ಈ ವರ್ಷದ ಜನವರಿಯಲ್ಲಿ ಶಾಲೆಯ ಬಿಸಿಯೂಟದ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಬೇರೆಡೆಗೆ ಸಾಗಿಸಲು ಮುಖ್ಯ ಶಿಕ್ಷಕಿ ಯತ್ನಿಸಿದಾಗ ಗ್ರಾಮಸ್ಥರು ಪತ್ತೆಹಚ್ಚಿ ಅಧಿಕಾರಿಗಳಿಗೆ ತಿಳಿಸಿದ್ದರು. ಆಹಾರ ಧಾನ್ಯ ಕಬಳಿಸಲು ಯತ್ನಿಸಿದ್ದ ಮುಖ್ಯಶಿಕ್ಷಕಿಯ ವಿರುದ್ದ ಶಾಲೆ ಆವರಣದಲ್ಲಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಆಗ ಸ್ಥಳಕ್ಕೆ ಬಂದ ಬಿ.ಇ.ಒ ಅವರು ಮುಖ್ಯಶಿಕ್ಷಕಿಯನ್ನು ಬೇರೆಡೆಗೆ ನಿಯೋಜನೆ ಮೇಲೆ ಕಳುಹಿಸಿದ್ದರು.ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ನಿಯೋಜನೆ ಅವಧಿ ಮುಗಿಸಿದ ಶಿಕ್ಷಕಿ ಮತ್ತೆ ಇಲ್ಲಿಗೇ ಬಂದಿದ್ದಾರೆ.
ಶಿಕ್ಷಕಿಯರ ಜಗಳ ಮತ್ತೆ ಮುಂದುವರಿದಿದೆ. ಅಧಿಕಾರಿಗಳು ಕೂಡಲೇ ಶಿಕ್ಷಕಿಯರ ವಿರುದ್ದ ಕ್ರಮಕೈಗೊಳ್ಳದಿದ್ದಲ್ಲಿ
ಉಳಿದ ಎಲ್ಲ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿಸಲು ಪೋಷಕರು ನಿರ್ಧರಿಸಿದ್ದಾರೆ. ಶಿಕ್ಷಕಿಯರ ವಿರುದ್ದ ಕೂಡಲೇ ಕ್ರಮಕೈಗೊಂಡು ಶಾಲೆಗೆ ಬೇರೆ ಶಿಕ್ಷಕಿಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಸ್ವಾತಿಶ್ರಿ, ಸದಸ್ಯ ಕೆ.ಆರ್.ದಿನೇಶ್, ಎಸ್,ಡಿಎಂಸಿ ಉಪಾಧ್ಯಕ್ಷೆ ಕಾವ್ಯ, ಸದಸ್ಯರಾದ ಬಿ.ಕೆ.ಚಂದ್ರಶೇಖರ್, ಯು.ಹೆಚ್.ರಾಜಶೇಖರ್, ಶಿವರಾಜ್, ಹರೀಶ್, ಗೋಪಾಲ, ಮಧು, ರಂಜಿನಿ,
ನಾಗೇಶ್, ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಂ.ಆರ್.ನಜೀರ್, ಮಾಜಿ ಮ.ಪಂ.ಸದಸ್ಯ ಕೆ.ಕೆ.ರಾಮಯ್ಯ, ಗ್ರಾಮಸ್ಥರಾದ ರವಿಕುಮಾರ್, ಚೆನ್ನಕೇಶವ, ಪರಮೇಶ ಮತ್ತಿತರರಿದ್ದರು.
ವರದಿ:ವಿಜಯ್ ಕುಮಾರ್.ಟಿ.ಮೂಡಿಗೆರೆ