ಮೂಡಿಗೆರೆ:ಮೂಡಿಗೆರೆ ವಲಯ ಕೃಷಿ ವಿಜ್ಞಾನ ಕೇಂದ್ರ,ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಡಿ.27 ಮತ್ತು 28ರಂದು ಕೃಷಿ ಮತ್ತು ತೋಟಗಾರಿಕೆ ಮೇಳ 2024 ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾನಿಲಯದ ಡೀನ್ ಡಾ.ಶ್ರೀನಿವಾಸ್ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರು ನೆರವೇರಿಸಲಿದ್ದಾರೆ. ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಕೃಷಿಯಲ್ಲಿ ಡ್ರೋನ್ ಬಳಕೆ, ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ, ವೈಜ್ಞಾನಿಕ ಮೀನು ಕೃಷಿ, ವಿದೇಶಿ ಹಣ್ಣಿನ ಬೆಳೆಗಳು, ಹವಾಮಾನ ಆಧಾರಿತ ಕೃಷಿ, ಅಧಿಕ ಇಳುವರಿಯ ಭತ್ತದ ತಳಿ, ಎರೆಹುಳು ಗೊಬ್ಬರ ತಯಾರಿಕೆ, ಕಾಳುಮೆಣಸು, ಮಾಧ್ಯಮಿಕ ಕೃಷಿ ಮತ್ತು ಭತ್ತದ ಸಾಂಪ್ರದಾಯಿಕ ತಳಿಗಳ ಪ್ರಾತ್ಯಕ್ಷಿಕೆ ಇರುತ್ತದೆ.ಅಲ್ಲದೇ ಏಲಕ್ಕಿ ಬೆಳೆಗಳ ತಾಯಿ ಕ್ಷೇತ್ರ, ರೈತ-ವಿಜ್ಞಾನಿಗಳ ವಿಚಾರ ವಿನಿಮಯ, ಪ್ರಗತಿಪರ ರೈತರಿಗೆ ಸನ್ಮಾನ, ವಿವಿಧ ಕೃಷಿ ಸಂಬoಧಿತ ಇಲಾಖೆಗಳ ಹಾಗೂ ಕೃಷಿ ಪರಿಕರಗಳ ಸಂಸ್ಥೆಗಳಿoದ ಬೀಜ,ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ, ವಿವಿಧ ತಳಿಗಳ ಕೋಳಿ, ಕುರಿ ಮತ್ತು ಜಾನುವಾರುಗಳು, ಮತ್ತು ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಬೆಳೆಗಾರರ ಸಂಗದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ,ಮೂಡಿಗೆರೆಯ ಕೃಷಿ ಸಂಶೋಧನಾ ಕೇಂದ್ರ ರಾಜ್ಯದಲ್ಲೇ ಮಂಚೂಣಿಯಲ್ಲಿದೆ.ರೈತರಿಗೆ ಹೊಸಹೊಸ ಅವಿಷ್ಕಾರಗಳ ಬಗ್ಗೆ ಇಲ್ಲಿನ ವಿಜ್ಞಾನಿಗಳು ಕಾಲಕಾಲಕ್ಕೆ ಮಾಹಿತಿ ನೀಡುತ್ತಾರೆ.ಕಳೆದ 15 ವರ್ಷಗಳಿಂದ ಕೃಷಿ ಮತ್ತು ತೋಟಗಾರಿಕಾ ಮೇಳ ಅಯೋಜಿಸಿ ರೈತರಿಗೆ ಹೆಚ್ಚಿನ ಮಾಹಿತಿ ನೀಡುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ವಾರ್ಷಿಕ 150ರಿಂದ 250 ಇಂಚು ಮಳೆಯಾಗುತ್ತದೆ. ತರಿಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.ಕಳೆದ 4-5 ವರ್ಷದಿಂದ ಹವಾಮಾನ ವೈಪರ್ಯದಿಂದಾಗಿ ರೈತರಿಗೆ ಹೆಚ್ಚಿನ ನಷ್ಟವುಂಟಾಗಿದೆ. ಅತಿವೃಷ್ಟಿಯಿಂದಾದ ಜಮೀನು ಮತ್ತು ಬೆಳೆ ಹಾನಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು.ಈ ಬಗ್ಗೆ ಕೃಷಿ ಮೇಳದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಡಿಕೇರಿಯ ಪ್ರಾದೇಶಿಕ ಕಚೇರಿ, ಐ.ಸಿ.ಎ.ಆರ್-ಐ.ಐ.ಎಸ್.ಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎಂ.ಎನ್. ವೇಣುಗೋಪಾಲ್, ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇoದ್ರದ ಪ್ರಧಾನ ಸಂಶೋಧಕ ಡಾ.ನಾಗರಾಜಪ್ಪ ಅಡಿವಪ್ಪರ್, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಮoಜುನಾಥ, ಮೂಡಿಗೆರೆಯ ವ.ಕೃ.ಮ.ತೋ.ಸಂ.ಕೇoದ್ರದ ಯೋಜನಾ ಮುಖ್ಯಸ್ಥ ಡಾ.ಎಂ.ವೈ.ಉಲ್ಲಾಸ, ತೋಟಗಾರಿಕೆ ಮಹಾವಿದ್ಯಾಲಯದ ಕೊಲ್ಲೋತ್ತರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೈ.ಕಾಂತರಾಜ್ ಅವರು ತಾಂತ್ರಿಕ ಹಾಗೂ ವಿವಿಧ ಬೆಳೆಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆಂದು ತಿಳಿಸಿದರು.
ಕೆವಿಕೆ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಮೇಳ ರೈತರಿಗೆ ಜ್ಞಾನದ ಬಂಡಾರ ವಾಗಲಿದೆ. ಯಾoತ್ರೀಕರಣ ಮತ್ತು ಕೃಷಿ ಸಂಭoದಿತ ವಿವಿಧ ವಸ್ತುಗಳ 100 ಮಳಿಗೆಗಳನ್ನು ತೆರೆಯಲಾಗುವುದು. ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.ನಮ್ಮ ಸಂಸ್ಥೆಯಿoದ ತರಬೇತಿ ಪಡೆದ 15 ಮಂದಿ ರೈತರು ಕೃಷಿ ಸಂಭoದಿತ ಉದ್ಯಮಿಯಾಗಿದ್ದಾರೆ.ರೈತರು ಕುರಿ ಮೇಕೆ, ಜಾನುವಾರು ಗೊಬ್ಬರ ಹಾಗೂ ಅಡಿಕೆ ಸಿಪ್ಪೆಯಿಂದ ಕಾoಪೋಸ್ಟ್ ಗೊಬ್ಬರ ತಯಾರಿಸಿ ಬೆಳೆಗಳನ್ನು ಅಭಿವೃದ್ದಿ ಪಡಿಸಬಹು ದಾಗಿದೆ.ರಾಸಾಯನಿಕ ಮುಕ್ತ ಬೆಳೆ ಬೆಳೆಯುವ ವಿಧಾನದ ಬಗ್ಗೆ ರೈತರಿಗೆ ಮೇಳದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು.2 ಏಕರೆ ಜಮೀನಿನಲ್ಲಿ ಪ್ರತಿವರ್ಷ 5-6 ಲಕ್ಷ ರೂ ಸಂಪಾದಿಸುವ ವಿಧಾನಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಡಿಕೇರಿಯ ಪ್ರಾದೇಶಿಕ ಕಛೇರಿ ನಿವೃತ್ತಪ್ರಧಾನ ವಿಜ್ಞಾನಿಗಳಾದ ಡಾ.ಎನ್.ಎಂ.ವೇಣುಗೋಪಾಲ್, ರೈತ ಉತ್ಪಾದಕರ ಸಂಘದ ಅಧ್ಯಕ್ಷ ಹೆಚ್.ಕೆ.ಪೂರ್ಣೇಶ್,ವ.ಕೃ.ತೋ.ಸಂ. ಕೇಂದ್ರದ ಹಿರಿಯ ಕ್ಷೇತ್ರಾಧಿಕ್ಷಕಿ ಡಾ. ಸಿ.ಕೆ.ಪ್ರಮಿಳ,ಕಡೇಮಡ್ಕಲ್ ಕೃ.ಮ.ತೋ.ಸಂ. ಕೇಂದ್ರದ ಡಾ. ಎ.ವಿ.ಸ್ವಾಮಿ ಉಪಸ್ಥಿತರಿದ್ದರು.