ಮೂಡಿಗೆರೆ:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾಗಿದ್ದರೂ ಪಕ್ಷ ಈಗ ಪುನಹ ಬಲಿಷ್ಟವಾಗಿ ಬೆಳೆಯುತ್ತಿದೆ. ಇದೇ ರೀತಿಯ ವಾತಾವರಣ ಮುಂದುವರಿದಲ್ಲಿ 2028 ಅಥವಾ ಅದಕ್ಕೂ ಮೊದಲೇ ಘೋಷಣೆ ಯಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಪ್ರಚಂಡ ಬಹುಮತಗಳಿಸಲಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ಹೇಳಿದರು.
ಅವರು ಸೋಮವಾರ ಬಾಳೂರು ಮಹಾಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಕಳೆದ ಬಾರಿ ಕಾಂಗ್ರೆಸ್ ಮತದಾರರಿಗೆ ಸುಳ್ಳು ಭರವಸೆ ನೀಡಿದ್ದರಿಂದ ಬಿಜೆಪಿ ಸೋಲು ಅನುಭ ವಿಸಬೇಕಾಯಿತು.ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸದೆ ವಂಚಿಸಿದ್ದಾರೆ. ಮತ್ತೊಂದೆಡೆ ರಾಜ್ಯದ ಅಭಿವೃದ್ದಿಗೆ ಹಣವಿಲ್ಲದೆ ಚಿಂತೆಗೀಡಾ ಗಿದ್ದಾರೆ.ಸರ್ಕಾರಿ ನೌಕರರಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲ. ರಸ್ತೆ ಗುಂಡಿ ಮುಚ್ಚಲು ಮತ್ತು ಕುಡಿಯುವ ನೀರು ಒದಗಿಸಲು ಹಣವಿಲ್ಲ. ಅತಿವೃಷ್ಟಿಯಿಂದ ನಿರಾಶ್ರಿತರಾದವರಿಗೆ ಪರಹಾರ ನೀಡಿಲ್ಲ. ಪ್ರತಿಮನೆಗೆ 200ಯುನಿಟ್ ವಿದ್ಯುತ್ ನೀಡಿ ಅದಕ್ಕಿಂತ ಹೆಚ್ಚಾಗಿ ಬಳಸಿದಲ್ಲಿ ಪ್ರತಿ ಯೂನಿಟ್‌ನ ಬೆಲೆ ಏರಿಸಿ ಬಳಕೆದಾರರನ್ನು ಸುಲಿಗೆ ಮಾಡಿ ವಂಚಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ದೂರಿದರು.
ಮಾಜಿ ಸಚಿವ ಡಿ.ಎನ್.ದೇವರಾಜ್ ಮಾತನಾಡಿ, ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಲಾಗುತ್ತದೆ.ಲೋಕಸಭೆ ಚುನಾವಣೆಯ ನಂತರ ಪಕ್ಷವನ್ನು ಬಲವಾಗಿ ಸಂಘಟಿಸಿದ ಪರಿಣಾಮ ಪಕ್ಷ ಬಲಿಷ್ಟವಾಗಿ ಬೆಳೆದಿದೆ. ಸದ್ಯದಲ್ಲೇ ನಡೆಯಲಿರುವ ಜಿ.ಪಂ. ತಾ.ಪಂ. ಚುನಾವಣೆಗೆ ಸಿದ್ದತೆ ನಡೆಸಲಾಗಿದೆ.ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಭುಗಿಲೆದ್ದುದರಿಂದ ಸರ್ಕಾರವನ್ನು ಕೆಡವಲು ಕಾಂಗ್ರೆಸ್ಸಿಗರ ಒಂದು ಗುಂಪು ತಯಾರಿ ನಡೆಸಿದಂತೆ ಗೋಚರವಾಗುತ್ತಿದೆ. ಸದಸ್ಯದಲ್ಲೇ ವಿಧಾನಸಭೆ ವಿಸರ್ಜನೆಯಾದರೂ ಅಚ್ಚರಿಯಿಲ್ಲ. ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿ ಕನಿಷ್ಟ 150ಕ್ಕಿಂತ ಹೆಚ್ಚು ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಹಾಗಾಗಿ ಪಕ್ಷದ ಸಂಘಟನೆ ಸಮರೋಪಾದಿಯಲ್ಲಿ ನಡೆದಿದೆ ಎಂದು ತಿಳಿಸಿದರು.
ಬಾಳೂರು ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಬಿ.ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮುಖಂಡರಾದ ದೀಪಕ್ ದೊಡ್ಡಯ್ಯ, ಎಂ.ಎಲ್.ವಿಜಯೇoದ್ರ, ಜೆ.ಎಸ್.ರಘು, ಟಿ.ಎಂ.ಗಜೇoದ್ರ, ಕೆ.ಆರ್.ಕೇಶವ, ಭರತ್, ಪ್ರಮೋದ್ ದುಂಡುಗ, ಬಿ.ಆರ್.ಬಾಲಕೃಷ್ಣ,ಪರೀಕ್ಷಿತ್ ಜಾವಳಿ ಮತ್ತಿತರರಿದ್ದರು.
———–ವಿಜಯ್ ಕುಮಾರ್ ಟಿ