ಮೂಡಿಗೆರೆ:ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಅನುಕೂಲತೆಗಳಿರಲಿಲ್ಲ. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿದ್ದಾರೆಂಬ ದೊಡ್ಡಮಟ್ಟದ ಆರೋಪಗಳಿತ್ತು. ಆದರೆ ಈಗ ಎಲ್ಲರೂ ಉನ್ನತಮಟ್ಟದ ಶಿಕ್ಷಣ ಪಡೆಯುತ್ತಿರುವ ಕಾರಣ ಮಹಿಳೆಯರು ಸ್ವಾವಲಂಭಿಗಳಾಗಿದ್ದಾರೆ ಎಂದು ಪ.ಪಂ.ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ತಿಳಿಸಿದರು.
ಅವರು ಸೋಮವಾರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಸೀತೆಯಂತೆ ತಾಳ್ಮೆ ವಹಿಸಿ ಶಿಕ್ಷಣ ಪಡೆದರೆ ದೌರ್ಜನ್ಯದ ವಿರುದ್ದ ಹೋರಾಡಲು ದುರ್ಗಿಯ ಶಕ್ತಿ ಬರುತ್ತದೆ. ವಿಧ್ಯಾರ್ಥಿನಿಯರು ಅಂಕಕ್ಕಾಗಿ ಮುಗಿಬಿದ್ದು ಶಿಕ್ಷಣವನ್ನು ಮೊಟಕುಗೊಳಿಸಿರುವ ಉದಾಹರಣೆಯಿದೆ.ಗುಣಾತ್ಮಕ ಶಿಕ್ಷಣ ಪಡೆದರೆ ಅಂಕಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.ಅಂಕಕ್ಕಾಗಿ ಹಾತೊರೆಯುವ ಅಗತ್ಯವಿಲ್ಲ.ಶಿಕ್ಷಣ ಪಡೆದ ಬಳಿಕ ಉದ್ಯೋಗಕ್ಕಾಗಿ ಪ್ರಯತ್ನ ಪಡಬೇಕು. ಉನ್ನತ ಶಿಕ್ಷಣದ ನಂತರ ಸುಮ್ಮನೆ ಮನೆಯಲ್ಲಿ ಕುಳಿತರೆ ಅಡುಗೆ ಮನೆಗೆ ಮೀಸಲಾಗಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದು ಸರ್ಕಾರಿ ಕೆಲಸ ಗಿಟ್ಟಿಸಿ ಕೊಳ್ಳಬಹುದು. ಪಠ್ಯದ ಜೊತೆಯಲ್ಲಿ ಕ್ರೀಡಾಕೂಟ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆ ಗಳಲ್ಲಿ ಭಾಗವಹಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಧ್ಯಾರ್ಥಿನಿಯರು ಮುಂದೆ ಬರಬಹುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಪೂಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಧರಿಸುವುದು ವಾರ್ಷಿಕ ಪರೀಕ್ಷಾ ಫಲಿತಾಂಶ. ಪ್ರತಿವರ್ಷದ ಶೈಕ್ಷಣಿಕ ಸಾಲಿನಲ್ಲಿ ವಿಧ್ಯಾರ್ಥಿಗಳು ಶೇ.100 ಫಲಿತಾಂಶವನ್ನು ಪಡೆಯುವ ಮೂಲಕ ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು. ಪ್ರತಿದಿನ ಕಾಲೇಜಿಗೆ ಹಾಜರಾಗಿ ಪಾಠ ಪ್ರವಚನಗಳನ್ನು ಮನಸ್ಸಿಟ್ಟು ಕೇಳುವ ವಿಧ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಇಲ್ಲದಂತಹ ಶಿಕ್ಷಣ ನೀಡಲು ಸರ್ಕಾರಿ ಕಾಲೇಜುಗಳು ಸಿದ್ದವಾಗಿದೆ. ಅದರ ಪ್ರಯೋಜನ ಪಡೆದು ವಿಧ್ಯಾರ್ಥಿಗಳು ತಮ್ಮ ಪೋಷಕರಿಗೆ ಮತ್ತು ಕಲಿಸಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದಲ್ಲಿ ತಾವು ಕಲಿತ ಶಿಕ್ಷಣ ಸಂಸ್ಥೆಗಳಿಗೆ ಗೌರವ ನೀಡುವಂತಾಗುವುದಲ್ಲದೆ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಉಪನ್ಯಾಸಕರಾದ ವೈ.ಕೆ.ಪೂರ್ಣಿ, ಡಿ.ವನಜಾಕ್ಷಿ, ಬಿ.ಎ.ದೈವಿಕಾ,ಡಿ.ಬಿ.ಸವಿತಾ, ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಯಾಕೂಬ್,ಗೌರವಾಧ್ಯಕ್ಷ ಹೆಚ್.ಎಸ್.ರವಿ ಮತ್ತಿತರರಿದ್ದರು.
………….ವರದಿ:ವಿಜಯಕುಮಾರ್.ಟಿ.ಮೂಡಿಗೆರೆ.