ಮೂಡಿಗೆರೆ:ಒಂಟಿ ಸಲಗವೊಂದು ಶನಿವಾರ ಮಧ್ಯರಾತ್ರಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ನಿದ್ದೆಗೆಡಿಸಿದೆ. ಜನತೆ ಭಯಭೀತರಾಗಿದ್ದು ಬೆಳಗ್ಗೆ 8ರ ವರೆಗೂ ಕಾಡಾನೆ ಸಾಗಿದ ಪ್ರದೇಶದವರು ಯಾರೂ ಮನೆಯಿಂದ ಹೊರಬಂದಿರುವುದಿಲ್ಲ.
ಕಾಡಾನೆ ಶನಿವಾರ ಘಟ್ಟದಹಳ್ಳಿ ಮತ್ತು ಬೀಜುವಳ್ಳಿ ಗ್ರಾಮದಲ್ಲಿ ಅತ್ತಿತ್ತ ತಿರುಗಾಡುತ್ತಾ ಕಾಫಿ ತೋಟದಲ್ಲಿ ಗಿಡಗಳನ್ನು
ದ್ವಂಸಮಾಡುತ್ತಾ ರಾತ್ರಿ 11ರ ಬಳಿಕ ಪಟ್ಟಣದತ್ತ ಹೆಜ್ಜೆ ಹಾಕಿದೆ.ಮಧ್ಯ ರಾತ್ರಿ 1 ಗಂಟೆಗೆ ಪಟ್ಟಣದ ದೊಡ್ಡಿಬೀದಿಯ ಮೂಲಕ ಗಂಡೆಹಳ್ಳಿ ರಸ್ತೆಯಲ್ಲಿ ಸಾಗಿದೆ.ನಂತರ ಪಟ್ಟಣ ಪಂಚಾಯಿತಿ ರಸ್ತೆಯಲ್ಲಿ ಸಾಗಿರುವ ದೃಶ್ಯ ಆ ಪರಿಸರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಲ್ಲಿಂದ ಕೆ.ಎಂ.ರಸ್ತೆಗೆ ತಿರುಗಿದಾಗ ಅರಣ್ಯ ಇಲಾಖೆ ತಂಡದವರು ಕಾರ್ಯಾಚರಣೆ ನಡೆಸಿ ಸಾರಗೋಡು ಮೀಸಲು ಅರಣ್ಯದತ್ತ ಅಟ್ಟಲು ಮುಂದಾಗಿದ್ದಾರೆ.ಆಗ ಅದು ಹೊಯ್ಸಳ ಕ್ರೀಡಾಂಗಣದತ್ತ ಸಾಗಿ ಅಲ್ಲಿಂದ ಪೋಲೀಸ್ ವಸತಿ ಗೃಹದ ಮುಂದಿನ ರಸ್ತೆ ಮೂಲಕ ಸೆಂಟ್,ಮಾರ್ಥಾಸ್ ಶಾಲೆಯ ಕಾಫಿ ತೋಟದೊಳಕ್ಕೆ ನುಸುಳಿದೆ.ಅಲ್ಲಿಂದ ನೇರವಾಗಿ ಜಾನ್ ಡಿಸೋಜಾ ಎಂಬುವವರ ತೋಟಕ್ಕೆ ನುಗ್ಗಿ ಆ ತೋಟದ ಗೇಟ್ ದ್ವಂಸಗೊಳಿಸಿ ಅಲ್ಲಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಸಾಗಿ ಮಂಚೇಗೌಡ ಅವರ ಕಾಫಿ ತೋಟಕ್ಕೆ ನುಸುಳಿದೆ.
ಬೆಳಗಿನ ಜಾವ 3ಗಂಟೆಯಿoದ ಆ ತೋಟದಲ್ಲಿ ಅರಣ್ಯ ಇಲಾಖೆ ತಂಡದವರು ಕೂಂಬಿoಗ್ ನಡೆಸಿದ್ದಾರೆ. ಕಾಡಾನೆ ಮತ್ತೆ ಪಟ್ಟಣಕ್ಕೆ ತೆರಳದಂತೆ ಕಟ್ಟೆಚ್ಚರ ವಹಿಸಿದ್ದಾರೆ.ಕಳೆದವಾರ ಕಡೆಮಾಡ್ಕಲ್ ಗ್ರಾಮದಲ್ಲಿ 3 ಕಾಡಾನೆ ಕಾಣಿಸಿಕೊಂಡಿತ್ತು. ಆ ಗುಂಪಿನಿoದ 1ಕಾಡಾನೆ ಬೇರ್ಪಟ್ಟು ಮುದ್ರೆಮನೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಅಣಜೂರು ಗ್ರಾಮದ ಮೂಲಕ ಕಿರುಗುಂದ ಗ್ರಾಮಕ್ಕೆ ತೆರಳಿ ಅಲ್ಲಿನ ಕಾಫಿ ತೋಟದಲ್ಲಿ ಒಂದು ದಿನ ಬೀಡುಬಿಟ್ಟು ಕಾಫಿ ಗಿಡಗಳನ್ನು ದ್ವಂಸಗೊಳಿಸಿತ್ತು.
ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಚೀಕನಹಳ್ಳಿ ಸಮೀಪದ ಕಾನಹಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದ್ದರು.ಮತ್ತೆ ಅದೇ ಕಾಡಾನೆ ಅಲ್ಲಿಂದ ಹೊರಟು ಕಸ್ಕೆಬೈಲ್,ಕಮ್ಮರಗೋಡು ಬೀಜುವಳ್ಳಿ ಮೂಲಕ ಸಾಗಿ ಪಟ್ಟಣಕ್ಕೆ ಪ್ರವೇಶಿಸಿದೆ ಎಂದು ಅಂದಾಜಿಸಲಾಗಿದೆ. ಗುಂಪಿನಲ್ಲಿದ್ದ ಇನ್ನೆರಡು ಸಲಗಗಳನ್ನು ಈ ಕಾಡಾನೆ ಹುಡುಕುತ್ತಿದೆ ಎಂದು ಅರಣ್ಯಾಧಿಕಾರಿಗಳ ಅಭಿಪ್ರಾಯವಾಗಿದ್ದು ಆ ಎರಡು ಕಾಡಾನೆಗಳು ಈಗ ಕಾನಹಳ್ಳಿ ಅರಣ್ಯದತ್ತ ಸಾಗಿದೆ.
ಪಟ್ಟಣಕ್ಕೆ ಕಾಡಾನೆ ಪ್ರವೇಶಿಸುತ್ತಿದ್ದಂತೆ ಯಾರೊಬ್ಬರೂ ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆ ಅಧಿಕಾರಿಗಳು 2 ವಾಹನದಲ್ಲಿ ಮಧ್ಯರಾತ್ರಿಯಿಂದ ದ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಪ್ರಚಾರ ನಡೆಸಿದ್ದಾರೆ. ಬೆಳಗ್ಗೆ ಯಾರೂ ವಾಯುವಿಹಾರಕ್ಕೆ ತೆರಳದಂತೆಯೂ ಎಚ್ಚರಿಕೆ ನೀಡಿದ್ದರು. ಹಾಗಾಗಿ ಯಾರೊಬ್ಬರು ವಾಯುವಿಹಾರಕ್ಕಾಗಲೀ, ಬೆಳಗಿನ ನಮಾಜಿಗಾಗಲಿ,ಹಾಲು, ಪತ್ರಿಕೆ ತರುವುದಕ್ಕಾಗಲೀ ಮನೆಯಿಂದ ಹೊರಗೆ ಹೋಗಲಿಲ್ಲ. ಹಾಲು, ದಿನಪತ್ರಿಕೆ ವಿತರಕರು ಕೂಡಾ ತಡವಾಗಿಯೇ ತಮ್ಮ ದಿನನತ್ಯದ ವ್ಯವಹಾರಕ್ಕೆ ಹೊರಗೆ ಬರಬೇಕಾಯಿತು.ಕಳೆದ 6 ವರ್ಷದಲ್ಲಿ 5 ಬಾರಿ ಕಾಡಾನೆ ಪಟ್ಟಣಕ್ಕೆ ಪ್ರವೇಶಿಸಿದೆ. ಕಾಡಾನೆ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹಿಡಿಶಾಪ ಹಾಕುತ್ತಿದ್ದಾರೆ.
——————-ವಿಜಯ್ ಕುಮಾರ್ ಟಿ