ಮೂಡಿಗೆರೆ:ಸರ್ಕಾರಿ ನೌಕರರ ಚುನಾವಣೆಗೆ ಆರೋಗ್ಯ ಇಲಾಖೆಯ 14 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.ಇದನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಆರೋಗ್ಯ ಇಲಾಖೆ ನೌಕರರು ಶುಕ್ರವಾರ ಚುನಾವಣಾಧಿಕಾರಿ ರಮೇಶ್ ಹಾಗೂ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅರೋಗ್ಯ ಇಲಾಖೆ ನೌಕರರು ಮಾತನಾಡಿ, ಆರೋಗ್ಯ ಇಲಾಖೆಯ 3 ಕ್ಷೇತ್ರದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹೆಸರನ್ನು ಒಂದೇ ಮತ ಪತ್ರದಲ್ಲಿ ಸೇರಿಸಲಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ಆದರೆ ಆರೋಗ್ಯ ಇಲಾಖೆಯ ಡಾ.ರೂಪಾ, ಡಾ.ಗೌತಮ್, ಡಾ.ವಿರೂಪಾಕ್ಷ, ಡಾ.ಉಮೇಶ್‌ಭಟ್, ಹೇಮಾ,ನಳಿನಾಕ್ಷಿ ಸೇರಿದಂತೆ 14 ಮಂದಿ ನೌಕರರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದರು.
ಹಿಂದಿನ ಅಧ್ಯಕ್ಷರು ಮತದಾರ ಪಟ್ಟಿ ತಯಾರಿಸುವಾಗ, ನಮ್ಮ ಇಲಾಖೆಯಲ್ಲಿರುವ ನೌಕರರ ಬಗ್ಗೆ ನಮ್ಮಿಂದ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ನಿಯಮದ ಪ್ರಕಾರದ ಚುನಾವಣೆ ಪ್ರಕ್ರಿಯೆ ನಡೆಯುವ 26 ದಿನದ ಹಿಂದೆಯೇ ಮತದಾರ ಪಟ್ಟಿ ನೋಟೀಸ್ ಬೋರ್ಡ್ನಲ್ಲಿ
ಹಾಕಬೇಕಿತ್ತು. ಅದನ್ನು ಮಾಡಲಿಲ್ಲ.
ಈ ಹಿಂದಿನ ಅಧ್ಯಕ್ಷರ ಅವದಿಯಲ್ಲಿ ಕೆಲ ಲೋಪವನ್ನು ವಿರೋಧಿಸಿದ್ದರಿಂದ ನಮ್ಮನ್ನು ಸೋಲಿಸಲು ಹಿಂದಿನ ಅಧ್ಯಕ್ಷ ಪದ್ಮರಾಜ್ ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ಸೇರಿಕೊಂಡು ತಂತ್ರ ರೂಪಿಸಿದ್ದಾರೆ. ಈ ಸಮಸ್ಯೆ ಬಗೆಹರಿಸುತ್ತೇವೆಂದು ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕಲ್ಬುರ್ಗಿಯಲ್ಲಿ ಇದೇ ಸಮಸ್ಯೆ ಉಂಟಾಗಿದ್ದು, ಕೈಬಿಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ.ಹಾಗಾಗಿ ಇಲ್ಲಿಯೂ ಕೂಡ ಕೈ ಬಿಟ್ಟವರಿಗೆ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಚುನಾವಣಾಧಿಕಾರಿಯೊಂದಿಗೆ ನಮಗೆ ನೇರವಾಗಿ ಸಂಪರ್ಕವಿಲ್ಲ. ಜಿಲ್ಲಾಧ್ಯಕ್ಷರು ಅವರ ಸಂಪರ್ಕ ಹೊಂದಿದ್ದಾರೆ. ಜಿಲ್ಲಾಧ್ಯಕ್ಷರಿಗೆ ತಾನು ಕರೆ ಮಾಡಿದಾಗ ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ತನ್ನ ವ್ಯಾಪ್ತಿಗೆ ಬರುವುದಿಲ್ಲ
ರಮೇಶ್,ಚುನಾವಣಾಧಿಕಾರಿ
ಆರೋಗ್ಯ ಇಲಾಖೆಯಿಂದ ಮಾಹಿತಿ ಕೊಟ್ಟ ಹಾಗೆ ಮತದಾರರ ಪಟ್ಟಿ ಕಳಿಸಿದ್ದೇವೆ. ಕೈ ಬಿಟ್ಟ ನೌಕರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ರಾಜ್ಯ ಚುನಾವಣೆ ಆಯೋಗದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಸೇರ್ಪಡೆಗೊಳಿಸಲು ಚುನಾವಣಾ ಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.
ಪದ್ಮರಾಜ್, ಮಾಜಿ ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ,ಮೂಡಿಗೆರೆ
—————ವಿಜಯ್ ಕುಮಾರ್