
ಮೂಡಿಗೆರೆ-ರಾಜಕಾರಣಿಗಳು ಅಥವಾ ರಾಜಕೀಯ ಆಸಕ್ತಿ ಇರುವವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿ ಆಯೋಜನೆ ಮಾಡಿ ಹೆಂಡ ತುಂಡನ್ನು ಭರ್ಜರಿಯಾಗಿ ನೀಡಿ ತಮ್ಮ ರಾಜಕೀಯ ಮೈಲೇಜ್ ಏರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ.
ಆದರೆ ಯಾವುದೇ ಇಂತಹ ದೂರಾಲೋಚನೆಯ ಕಾರಣಗಳಿಲ್ಲದೆ ಇಲ್ಲೊಂದು ಹಿರಿಯ ಜೀವ ತನ್ನ 90 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಊರು-ಕೇರಿಯ ಜನರನ್ನೆಲ್ಲ ಭೋಜನ ಕೂಟಕ್ಕೆ ಆಹ್ವಾನಿಸಿದ್ದು ಬಾರಿ ಪ್ರಚಾರ ಪಡೆದುಕೊಂಡಿದೆ.

ಈ ಹಿರಿಯ ಜೀವದ ಹೆಸರು ಸಿದ್ದೇಗೌಡ.ತಾಲೂಕಿನ ಹೆಗ್ಗುಡ್ಲು ಗ್ರಾಮದವರು.ಇದೆ ಶನಿವಾರದಂದು ತಮ್ಮ 90 ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಯೋಜಿಸಿದ್ದು,ತನ್ನ ಪರಿಚಯಸ್ತರು,ಸಂಬಂದಿಕರು ಹಾಗು ಪರಿಚಯವೇ ಇಲ್ಲದವರನ್ನು ಜಾತೀ-ಧರ್ಮದ ಲೆಕ್ಕಾಚಾರವಿಲ್ಲದೆ ಆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದು ತಾಲೂಕಿನಾದ್ಯಂತ ಬಾರಿ ಪ್ರಚಾರ ಪಡೆದುಕೊಂಡಿದೆ.
ಇದಕ್ಕಾಗಿ ಆಮಂತ್ರಣಪತ್ರವನ್ನು ಸಿದ್ಧಪಡಿಸಿರುವ ಸಿದ್ದೇಗೌಡರು ಅದರಲ್ಲಿ “ನಿಮ್ಮನ್ನೆಲ್ಲಾ ನೋಡುವ ಆಸೆ, ಮಾತನಾಡಿಸಬೇಕೆಂಬ ಬಯಕೆ,ಜೊತೆಗೆ ಕೂತು ಊಟ ಮಾಡಿ, ಹರಟೆ ಹೊಡೆಯುವ ಹೆಬ್ಬಯಕೆ-ಮರೆಯದೆ ಬಂದು ಹಾರೈಸಿ” ಎಂದು ಕೋರಿಕೊಂಡಿದ್ದಾರೆ.

ಮೂಡಿಗೆರೆ ಪಟ್ಟಣದ ಹೊರವಲಯದಲ್ಲಿರುವ ರೈತ ಭವನ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದು,19 ನೇ ತಾರೀಕಿನ ಶನಿವಾರ ನಡೆಯುವ ಈ ಕಾರ್ಯಕ್ರಮಕ್ಕೆ ತಾವು ಬಿಡುವು ಮಾಡಿಕೊಂಡು ಭೇಟಿ ನೀಡಿ ಹಿರಿಯ ಜೀವಕ್ಕೆ ಹಾರೈಸಿ.
—————ಆಶಾ ಸಂತೋಷ್ ಕೊಟ್ಟಿಗೆಹಾರ