
ಕೊಟ್ಟಿಗೆಹಾರ-ಮಲೆನಾಡಿನ ಕಾಫಿ ತೋಟದ ಮಾಲೀಕರು ಹೊರ ರಾಜ್ಯದ,ವಲಸೆ ಬಂದಿರುವ ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆದು ಪೊಲೀಸರಿಗೆ ನೀಡಿ ಸಹಕರಿಸಬೇಕು’ಎಂದು ಬಾಳೂರು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ದಿಲೀಪ್ ಕುಮಾರ್ ಹೇಳಿದರು.
ಅವರು ಬಾಳೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಬೆಳೆಗಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ದರು.ತೋಟಕ್ಕೆ ಹೊರ ಕಾರ್ಮಿಕರನ್ನು ನೇಮಿಸುವ ಮುನ್ನ ಅವರ ಪೂರ್ವಾಪರ,ಆಧಾರ್ ಕಾರ್ಡ್ ಮಾಹಿತಿ,ಕಾರ್ಮಿಕರ ಸಂಖ್ಯೆಯನ್ನು ತಾವು ದಾಖಲೆಯಾಗಿ ಸಂಗ್ರಹಿಸಿಡಬೇಕು.ನಕಲಿ ಆಧಾರ್ ಮಾಡಿಸಿ ಅಸ್ಸಾಂ,ಬಾಂಗ್ಲಾ ಮತ್ತಿತರ ಕಡೆಯಿಂದ ಕಾರ್ಮಿಕರು ರಾಜ್ಯಕ್ಕೆ ನುಸುಳುತ್ತಿದ್ದಾರೆ.ಅವರಿಂದ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧ ತಪ್ಪಿಸಲು ತೋಟದ ಮಾಲೀಕರು ಪೊಲೀಸರೊಂದಿಗೆ ಸಹಕರಿಸಬೇಕು.
ಪೋಕ್ಸೊ ಪ್ರಕರಣ,ಹಲ್ಲೆ ಮತ್ತಿತರ ಕಳವು ಪ್ರಕರಣಗಳು ದಾಖಲಾಗುತ್ತಿದ್ದು ವಲಸೆ ಬಂದಿರುವ ಕಾರ್ಮಿಕರು ಭಾಗಿಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ.ಅವುಗಳನ್ನು ತಪ್ಪಿಸಲು ನಾವು ಅವರಿಂದ ಸುರಕ್ಷಿತರಾಗಬೇಕು.ಹಿಂದೆ ಜೆ.ಹೊಸಹಳ್ಳಿಯಲ್ಲಿ ಗುರುತು ಇರುವ ವ್ಯಕ್ತಿಗಳೇ ದರೋಡೆ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.ಹಾಗಾಗಿ ನಾವು ಅವರಿಂದ ಜಾಗೃತರಾಗಲು ನಮ್ಮ ಗೋದಾಮು,ಅಂಗಡಿ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು.ಇದರಿಂದ ಕಳ್ಳರ ಜಾಡು ಹಿಡಿಯಲು ಸಾಧ್ಯವಾಗುತ್ತದೆ’ ಎಂದರು.

ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ ಬರೀ ಅಸ್ಸಾಂನಿಂದ ಮಾತ್ರ ಕೂಲಿ ಕಾರ್ಮಿಕರು ಬರುತ್ತಿಲ್ಲ.ದಾವಣಗೆರೆ, ಹಡಗಲಿ ಮತ್ತಿತರ ಕಡೆಯಿಂದ ಕೂಲಿ ಕಾರ್ಮಿಕರು ಬರುತ್ತಿದ್ದಾರೆ.ಅವರ ವಿಳಾಸ, ಮಾಹಿತಿಯನ್ನು ಮಾಲೀಕರು ಪಡೆಯಬೇಕು.ಪ್ರತಿಯೊಬ್ಬ ಮಾಲೀಕರು ಕಡ್ಡಾಯವಾಗಿ ತೋಟದಲ್ಲಿ ಕಾರ್ಮಿಕರ ವಿಮೆ ಮಾಡಿಸಿಕೊಳ್ಳುವುದು.ಲೈನ್ ಹಾಗೂ ಬಂಗಲೆ, ಗೋದಾಮಗಳಿಗೆ ಕ್ಯಾಮೆರಾ ಹಾಕಬೇಕು.ಕಾರ್ಮಿಕರನ್ನು ಸಾಗಿಸುವ ವಾಹನಗಳಿಗೆ ಎಫ್ ಸಿ,ವಿಮೆ ಮಾಡಿಸಬೇಕು.ಆಗ ಏನೇ ಅನಾಹುತ ಆದರೂ ಅದರಿಂದ ಬೆಳೆಗಾರರಿಗೆ ಹೊರೆಯಾಗದೇ ಅನುಕೂಲವಾಗುತ್ತದೆ.ತೋಟಕ್ಕೆ ಕಾರ್ಮಿಕರನ್ನು ನೇಮಿಸುವಾಗ ಹೆಣ್ಣು ಮಕ್ಕಳಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಿದರೆ ಒಳಿತು.ಇದರಿಂದ ಪೋಕ್ಸೋ ಪ್ರಕರಣ ತಡೆಯಬಹುದು’ಎಂದರು.
ಸಭೆಯಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಕಲ್ಮನೆ ಮಹೇಂದ್ರ, ಶಶಿಧರ್ ಜಾವಳಿ, ಸತೀಶ್ , ಶರಣು ಪಟೇಲ್, ಸುರೇಶ್, ಪೀಟರ್ ಡಿಸೋಜ, ಮಹೇಶ್ ಕಲ್ಮನೆ,ರವಿ ಸುಂಕಸಾಲೆ, ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ನಾಗರಾಜ್, ಅನಿಲ್,ಮನು,ಸಮ್ರಿನ್, ವಸಂತ್ ಮತ್ತಿತರರು ಇದ್ದರು.
————-ಆಶಾ ಸಂತೋಷ್