ಮೈಸೂರು- ಕೆಂಗಲ್ ಹನುಮಂತಯ್ಯರವರು ನಾಡು, ದೇಶ ಕಂಡ ಶ್ರೇಷ್ಠ ಅಪರೂಪದ ರಾಜಕಾರಣಿ, ಮುತ್ಸದ್ದಿ ಕರ್ನಾಟಕದ ಏಕೀಕರಣವು ಅವರ ಮಹಾನ್ ಸಾಧನೆ’ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.
ಇಂದು ಕರ್ನಾಟಕ ಸೇನಾ ಪಡೆಯ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಸ್ವತಂತ್ರ ಭಾರತದ ಪ್ರಮುಖ ಮುತ್ಸದ್ದಿ , ಧೀಮಂತ ರಾಜಕಾರಣಿ, ಕರ್ನಾಟಕ ಏಕೀಕರಣದ ರೂವಾರಿ ಆದ ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರ 117 ನೇ ಜಯಂತಿ ಅಂಗವಾಗಿ ಕೆಂಗಲ್ ಹನುಮಂತಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾಗೂ ನೆರೆದಿದ್ದ ಜನಸ್ತೋಮಕ್ಕೆ ಸಿಹಿ ವಿತರಣೆ ಮಾಡಿ ಮಾತನಾಡಿದ ಅವರು, ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ವಿಧಾನ ಸೌಧ ನಿರ್ಮಾಣ ಮಾಡಿ ” ಸರ್ಕಾರಿ ಕೆಲಸ ದೇವರ ಕೆಲಸ ” ಎಂದು ನಾಮಫಲಕ ಹಾಕಿದ್ದರು. ಕೇಂದ್ರ ರೈಲ್ವೆ ಮಂತ್ರಿಗಳಾಗಿಯೂ ಸಹ ಕರ್ನಾಟಕಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಘನೀಯ ಎಂದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಆಗಿನ ಹಳೇ ಮೈಸೂರು ರಾಜ್ಯ ಒಕ್ಕಲಿಗರ ಪ್ರಾಬಲ್ಯ ಹೊಂದಿತ್ತು. ಏಕೀಕರಣ ಆದರೆ ಒಕ್ಕಲಿಗರ ಪ್ರಾಬಲ್ಯ ಹಾಗೂ ಮುಖ್ಯ ಮಂತ್ರಿ ಪದವಿ ಹೋಗುತ್ತದೆ ಎಂದು ಎಲ್ಲಾ ಮುಖಂಡರುಗಳು ಹೇಳಿ ವಿರೋಧ ಮಾಡಿದರೂ, ಇವರು ಅದಾವುದಕ್ಕೂ ಮಣಿಯದೆ ಅಖಂಡ ಕರ್ನಾಟಕ ಆಗಲೇಬೇಕು ಎಂದು ಏಕೀಕರಣ ಬೆಂಬಲಿಸಿ ತಮ್ಮ ಮುಖ್ಯಮಂತ್ರಿ ಪದವಿ ಯನ್ನೇ ಕಳೆದುಕೊಂಡ ಮಹಾನ್ ನಾಯಕ ಹಾಗೂ ನಮ್ಮ ಭಾರತದಲ್ಲೇ ಎಲ್ಲೂ ಇಲ್ಲದಂತ ವಿಶ್ವ ಪ್ರಸಿದ್ಧ ವಿಧಾನ ಸೌಧದ ನಿರ್ಮಾತ ಶ್ರೀ ಕೆಂಗಲ್ ಹನುಮಂತಯ್ಯ ರವರ ಹುಟ್ಟು ಹಬ್ಬವನ್ನು ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಆಚರಣೆ ಮಾಡಬೇಕೆಂದು ಒತ್ತಾಯಿಸಿದರು.
ಹಿರಿಯ ಸಂಸ್ಕೃತಿ ಪೋಷಕರಾದ ಡಾ . ರಘುರಾಂ ಕೆ ವಾಜಪೇಯಿ ಮಾತನಾಡಿ ಕೆಂಗಲ್ ಹನುಮಂತಯ್ಯ ಅವರು ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಹೌದು, ಭವ್ಯವಾದ ವಿಧಾನಸೌಧವನ್ನು ಕಟ್ಟುವಾಗ ಕಟ್ಟಡದ ಇಂಜಿನಿಯರ್ ನ್ನು ಕೆಂಗಲ್ ಹನುಮಂತಯ್ಯನ ಸನ್ನಿಧಾನಕ್ಕೆ ಕರೆಸಿ ಹಾಲಿನ ಅಭಿಷೇಕ ಮಾಡಿಸಿ, ಆ ಹಾಲಿನ ಮೇಲೆ ಕೈ ಇಡಿಸಿ ನಾನು ಈ ವಿಧಾನಸೌಧವನ್ನು ಕಟ್ಟುವಾಗ ಪ್ರಾಮಾಣಿಕವಾಗಿ ಕಟ್ಟುತ್ತೇನೆ ಒಂದು ಪೈಸ ಹಣವನ್ನು ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಿಸಿ ವಿಧಾನ ಸೌಧ ಕಟ್ಟಿಸಿದ ಮಹಾನ್ ಪುರುಷರು ಎಂದರು .

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಗೋವಿಂದೇಗೌಡ, ಸಿ ಹೆಚ್ ಕೃಷ್ಣಯ್ಯ, ಪ್ರಭುಶಂಕರ್, ಶಿವಲಿಂಗಯ್ಯ, ನೇಹಾ, ವಿಜಯೇಂದ್ರ, ರಾಮಣ್ಣ, ಪ್ರಭಾಕರ, ಮೊಗಣ್ಣಾಚಾರ್, ಕುಮಾರ್ ಗೌಡ, ಸುಬ್ಬೇಗೌಡ, ಮಹದೇವಸ್ವಾಮಿ, ದರ್ಶನ್ ಗೌಡ, ಪದ್ಮ, ಸಿಂದುವಳ್ಳಿ ಶಿವಕುಮಾರ್, ಅಕ್ಬರ್, ರಾಮಕೃಷ್ಣೇಗೌಡ, ಲಕ್ಷ್ಮೇ ಗೌಡ, ಹನುಮಂತಯ್ಯ, ಜ್ಯೋತಿ, ಬಸವರಾಜು, ಗಣೇಶ್ ಪ್ರಸಾದ್, ವಿಷ್ಣು.. ಇನ್ನೂ ಮುಂತಾದವರು ಉಪಸ್ಥಿತರಿದ್ದರು.