ಮೈಸೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ,ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ರವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಮೈಸೂರು ಜಿಲ್ಲೆಯ ಸುಮಾರು 13 ಯು.ಎಲ್.ಬಿ. ಗಳಲ್ಲಿ, ಮನೆ ಮನೆ ಕಸ ಸಂಗ್ರಹಣೆ ಮಾಡುವ ಸ್ವಚ್ಛತಾ ವಾಹನ ಚಾಲಕರು ಮತ್ತು ಲೋಡರ್‌ಗಳು ಹಾಗೂ ಒಳಚರಂಡಿ ವಿಭಾಗದ ಸ್ವಚ್ಛತಾ ಕಾರ್ಮಿಕರಿಗೆ, ಸಂಬಳವನ್ನು ಸರ್ಕಾರ ನೇರ ಪಾವತಿ ಮಾಡುವುದಾಗಿ ಹೇಳಿ, ಆಯವ್ಯಯದಲ್ಲಿ ಕೆಳವರ್ಗದ ಸ್ವಚ್ಛತಾ ನೌಕರರನ್ನು ಉದಾಸೀನ ಮಾಡಿದ್ದು, ನೇರ ಪಾವತಿಗೆ ವಿಳಂಬ ನೀತಿಯನ್ನು ಅನುಸುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ರಾಜು ಮಾತನಾಡಿ, ಸ್ವಚ್ಛತಾ ಕೆಲಸ ಕಾರ್ಯಗಳನ್ನು ತಮ್ಮ ಆರೋಗ್ಯವನ್ನು ಕೆಡಸಿಕೊಂಡು ಉದ್ಯೋಗ ಭದ್ರತೆ ಇಲ್ಲದೆ ಉಚಿತ ಚಿಕಿತ್ಸೆ ಪಾಲಿಸಿ ಅಥವಾ ಸರ್ಕಾರ ಕಾರ್ಮಿಕ ಇಲಾಖೆ ನಿಗದಿ ಮಾಡಿರುವ ಕನಿಷ್ಠ ವೇತನ ವಂಚನೆಗೊಳಗಾಗುವುದಲ್ಲದೆ, ಹತ್ತಾರು ವರ್ಷಗಳ ಸೇವೆ ಮಾಡಿ, ಸೇವೆಯಲ್ಲಿ ಮೃತ ರಾದರೆ ಕುಟುಂಬ ವರ್ಗದವರಿಗೆ ಅನುಕಂಪದ ಕೆಲಸವನು ನೀಡದೇ ಇರುವುದರಿಂದ ತಕ್ಷಣ ಮೇಲ್ಕಂಡ ನೌಕರರ ವರ್ಗದವರನ್ನು ನೇರ ಪಾವತಿಗೊಳಿಸಬೇಕು.

ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ರೂ.1.50,000/- ಮತ್ತು ಫಲಾನುಭವಿ ವಂತಿಕೆ ಹಣ ರೂ.2.50,000/- ಈ ಹಿಂದೆಯೇ ತೀರ್ಮಾನವಾಗಿದ್ದು, ನಿಗದಿತ ಸಮಯಕ್ಕೆ ಮನೆಗಳನ್ನು ನೀಡದೆ ಹೆಚ್ಚುವರಿ ಖರ್ಚು, ವೆಚ್ಚಗಳನ್ನು ಪೌರ ಕಾರ್ಮಿಕರ ಮೇಲೆ ಹೊರೆ ಹೊರಿಸಿ ಪ್ರತಿ ಪೌರ ಕಾರ್ಮಿಕರು ರೂ.3,00,000/- ಗಳ ವಂತಿಕೆ ಹಣ ಕಟ್ಟಲು ಸೂಚಿಸಿರುವುದು ಅನ್ಯಾಯ. ಈ ಹಣವನ್ನು ಪೌರ ಕಾರ್ಮಿಕರಿಂದ ಕಟ್ಟಲು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಸದರಿ 158 ಪೌರ ಕಾರ್ಮಿಕರ ಫಲಾನುಭವಿಗಳ ಪರವಾಗಿ ಪಾಲಿಕೆಯು ಭರಿಸಬೇಕು ಮತ್ತು ಮನೆ ಮನೆ ಕಸ ಸಂಗ್ರಹಣೆ ಮಾಡುವ ವಾಹನ ಚಾಲಕರು, ಲೋಡರ್, ಒಳಚರಂಡಿ ವಿಭಾಗದ ಸ್ವಚ್ಛತಾ ಕಾರ್ಮಿಕ ಆರೋಗ್ಯ ದೃಷ್ಟಿಯಿಂದ ಹಣ ರಹಿತ ಸುಮಾರು ರೂ.5-00 ಲಕ್ಷದವರೆಗೂ ತುರ್ತು ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಪ್ರತಿಯೊಬ್ಬರಿಗೆ ನೀಡಬೇಕೆಂದು, ಮುಂದಿನ ಬಜೆಟ್‌ನಲ್ಲಿ ಹಣ ನಿಗದಿ ಪಡಿಸಲು ಆಗ್ರಹಿಸಿ ಮನವಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಡಿ. ಆರ್.ರಾಜು ಹಾಗೂ ಹಿರಿಯ ಸಲಹೆಗಾರರು ನಂಜಪ್ಪ ಬಸವನಗುಡಿ ಮತ್ತು ಅಧ್ಯಕ್ಷರು ಕುಮಾರಸ್ವಾಮಿ ಹಾಗೂ ಕಾರ್ಯಧ್ಯಕ್ಷರು ಮಂಚಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಮತ್ತು ಜಾಗೃತಿ ಸಮಿತಿಯ ಸದಸ್ಯರುಗಳಾದ ಪವಿತ್ರ, ವಸಂತಕುಮಾರಿ, ಹಾಗೂ ಜಾಗೃತಿ ಸಮಿತಿಯ ಕಾರ್ಯದರ್ಶಿ ಅಂಜಲಿ, ನೂರಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗವಹಿಸಿದ್ದರು. ಇನ್ನು ಮುಂತಾದವರು ಉಪಸ್ಥಿತಿಯಲ್ಲಿದ್ದರು.