ಮೈಸೂರು -ಪ್ರತಿ ಪ್ರದೇಶಕ್ಕೂ ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡುವುದರಿಂದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬಹುದಲ್ಲದೇ, ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಅಭಿವೃದ್ದಿ ಕೆಲಸಗಳನ್ನು ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಶಾಶ್ವತ ಕೆಲಸ ಮಾಡಬಹುದು ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಮಹಾನಗರ ಪಾಲಿಕೆಯ ವಾರ್ಡ್ 22 ರ ವ್ಯಾಪ್ತಿಯ ಪಡುವಾರಹಳ್ಳಿಯಲ್ಲಿ ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸಲು ತೆರಳಿದ ವೇಳೆ ಸಾರ್ಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ, ಶಾಸಕನಾದ ಮೇಲೆ ಗ್ರಾಮದ ಹಲವೆಡೆ ಒಳಚರಂಡಿ,ರಸ್ತೆ ಹಾಗು ಮಳೆ ನೀರು ಚರಂಡಿ ಕಾಮಗಾರಿ ನಡೆಯುತ್ತಲೇ ಇದೆ.
ಬಾಕಿ ಉಳಿದ ಕೆಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ , ಮಳೆ ನೀರು ಮೋರಿ, ಕಾಂಕ್ರೀಟ್ ರಸ್ತೆ ಮಾಡಿಸಿ ಶಾಶ್ವತವಾಗಿ ಸಮಸ್ಯೆಗಳು ಬರದಂತೆ ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಅಭಿವೃದ್ದಿ ಕಾಮಗಾರಿಯನ್ನು ಶಾಸಕರು ಖುದ್ದು ವೀಕ್ಷಣೆ ಮಾಡಿ ಬಾಕಿ ಇರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದು,ಅಂಬೇಡ್ಕರ್ ಕಾಲೋನಿಯ ಮುಂಭಾಗ ಹಾದು ಹೋಗಿರುವ ರಾಜ ಕಾಲುವೆಗೆ ಕಾಂಕ್ರೀಟ್ ಸ್ಲಾಬ್ ಗಳನ್ನು ಹಾಕಿಸಿ ಸೌಂದರ್ಯಕರಣಗೊಳಿಸುವುದಾಗಿ ಭರವಸೆ ನೀಡಿದರು.

ಊರಿನ ಹಿರಿಯರಾದ ಟಿ.ತಿಮ್ಮಯ್ಯ ಅವರು ತಮ್ಮ ಸ್ವಂತ ಬರವಣಿಗೆಯಲ್ಲಿ ಶಾಸಕರ ಕಾರ್ಯ ವೈಖರಿಯನ್ನು ಶ್ಲಾಘಿಸಿ ಬರೆದಿರುವ ಪತ್ರದ ಫ್ರೇಮ್ ಅನ್ನು ನೆನಪಿನ ಕಾಣಿಕೆಯಾಗಿ ನೀಡಿದರು, ಶಾಸಕರಾದ ನಂತರ ಇವರೆಗೂ ವಿವಿಧ ಅನುದಾನಗಳ ಮೂಲಕ ಗ್ರಾಮದಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚಿನ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವುದನ್ನು ತಿಳಿಸಿ ಗ್ರಾಮಸ್ಥರ ಪರವಾಗಿ ಅಭಿನಂದಿಸಿದರು,
ಇದೆ ವೇಳೆ ಮಾತನಾಡಿದ ಸ್ಥಳೀಯರು ಶಾಸಕರು ಯಾವಾಗಲೂ ನಮ್ಮ ಸಮಸ್ಯೆಗಳನ್ನೂ ಆಲಿಸಲು ಲಭ್ಯವಿರುತ್ತಾರೆ ಕಚೇರಿಯು ಹತ್ತಿರವೇ ಇರುವುದರಿಂದ ಅವರ ಆಪ್ತ ಸಹಾಯಕರನ್ನು ಸಂಪರ್ಕಿಸಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುತ್ತೇವೆ ಎಂದರು,
ಈ ವೇಳೆ ಇಷ್ಟು ವರ್ಷಗಳಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಮನೆಯ ಬಾಗಿಲಿಗೆ ಯಾವ ಶಾಸಕರು ಬಂದಿರಲಿಲ್ಲ ನೀವು ಬಂದದ್ದು ನಮಗೆ ಬಹಳ ಖುಷಿಯಾಗಿದೆ ಎಂದು ಗ್ರಾಮಸ್ಥರು ಶ್ಲಾಘಿಸಿದರು.

ಇದೇ ವೇಳೆ ಊರಿನ ಹಿರಿಯರು ಮಹಾರಾಣಿ ಕಾಲೇಜಿನ ಮಧ್ಯ ಇರುವ ರಸ್ತೆಗೆ ಸ್ವಾಗತ ಕಮಾನು ಹಾಕಿಸಿಕೊಡಬೇಕೆಂದು ಮನವಿ ಮಾಡಿದರು. ಪಾದಯಾತ್ರೆಯ ನಂತರ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಿ ಬಂದ ಅಲ್ಪ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರವಾಗಿ ಬಗೆಹರಿಸುವಂತೆ ಸೂಚಿಸಿದರು.
ಈ ಸಂಧರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು, ವಾರ್ಡ್ ಅಧ್ಯಕ್ಷರಾದ ಕುಮಾರ್, ಮುಖಂಡರಾದ ಜೆ . ಯೋಗೇಶ್,ಮರಿಸ್ವಾಮಿ, ಕೃಷ್ಣ, ಪಾಪಣ್ಣ, ರಾಮಚಂದ್ರ, ಮಹದೇಶ್,ಭೀಮಣ್ಣ, ಕೃಪಾನಂದ,ರಾಜಣ್ಣ,ನಿತಿನ್, ರಾಜೇಶ್ವರಿ ಪುಟ್ಟಸ್ವಾಮಿ, ಸೇರಿದಂತೆ ಹಲವಾರು ಗಣ್ಯರು ಗ್ರಾಮದ ಯಜಮಾನರು,ಪಕ್ಷದ ಕಾರ್ಯಕರ್ತರು,ಟ್ರಸ್ಟಿನ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.