ಮೈಸೂರು- ಅಧ್ಯಾಪಕರು ಪ್ರತಿನಿತ್ಯವೂ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಚಿಂತನಾಶೀಲರಾಗಲೂ ಹಾಗೂ ಉತ್ತಮ ಅಧ್ಯಾಪಕರಾಗಲು ಸಾಧ್ಯವಾಗುತ್ತದೆ ಎಂದು ಮೈಸೂರು ವಿ.ವಿ ಸಿಂಡಿಕೇಟ್ ಸದಸ್ಯ ಹಾಗೂ ಛಾಯಾದೇವಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಆಂಥೋಣಿ ಪಾಲರಾಜ್, ಹೇಳಿದರು.
ಮೈಸೂರಿನ ಛಾಯಾದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾಕಾಲೇಜು ಸಂಘದ ವತಿಯಿಂದ ರಾಷ್ಟ್ರೀಯ ಶೈಕ್ಷಣಿಕ ಮತ್ತು ಆಡಳಿತ ಸಂಸ್ಥೆ, ನವದೆಹಲಿ ನಡೆಸಿದ 15 ವಿಶ್ವವಿದ್ಯಾನಿಲಯ, 30 ಜನ ಪ್ರತಿನಿಧಿಗಳು ಭಾಗವಹಿಸಿದ್ದ ರಾಷ್ಟ್ರೀಯ ಕಾರ್ಯಗಾರದ ಉನ್ನತ ಶಿಕ್ಷಣದಲ್ಲಿ ನಾಯಕತ್ವದ ಬೆಳವಣಿಗೆ” ವಿಷಯ ಕುರಿತು ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಏರ್ಅಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜ್ಞಾನ ಅಧ್ಯಾಪಕರಲ್ಲಿ ಹೆಚ್ಚಾಗಬೇಕಾದರೆ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ ನಡೆಸುವ ರಾಷ್ಟçಮಟ್ಟದ ಕಾರ್ಯಗಾರಗಳಲ್ಲಿ ಭಾಗವಹಿಸಬೇಕು.
ಅಲ್ಲಿ ಸಿಗುವ ವಿಶೇಷ ಉಪನ್ಯಾಸ, ತಿಳುವಳಿಕೆ, ಪ್ರಯೋಗಾಲಯದ ಬೌದ್ಧಿಕ ಗುಣಮಟ್ಟ ವಿದ್ಯಾರ್ಥಿಗಳನ್ನು ಮನಮುಟ್ಟುವಂತೆ ಆಕರ್ಷಿಸುವ ಶೈಲಿ ನಮಗೆ ಸಿಗುತ್ತದೆ. ಜೊತೆಗೆ ಜ್ಞಾನವನ್ನು ಹಂಚಿಕೊಂಡು ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಪಿ.ಹೆಚ್‌ಡಿ ಪದವಿಗಳು ಅರ್ಹತೆಗಾಗಿ ಬೆಳೆಯುತ್ತಿದೆಯೇ ಹೊರತು ಹೊಸ ಹೊಸ ಸಂಶೋಧನೆಗಾಗಿ ಹುಡುಕುವ ಕಾತುರ ಕಡಿಮೆಯಾಗುತ್ತಿದೆ ಇದು ಬೇಸರದ ಸಂಗತಿ.

ಉನ್ನತ ಶಿಕ್ಷಣ ದೇಶದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಸಂಶೋಧನೆಗಳು ನಡೆಯಬೇಕೆಂದು ಅಭಿಪ್ರಾಯಿಸಿದರು.
ಬನುಮಯ್ಯ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಆರ್.ಸುರೇಶ್ ಮಾತನಾಡಿ ಬದುಕಿಗೆ ಶಿಕ್ಷಣ ಮಾನದಂಡವಲ್ಲ, ಜೀವನದ ಮೌಲ್ಯಗಳು ಅತ್ಯಂತ ಉಪಯುಕ್ತವಾಗುತ್ತದೆ. ಶಿಕ್ಷಣ ವಿದ್ಯಾವಂತನಾಗಿ ಮಾಡಿದರೆ ಅನುಭವ ಬದುಕನ್ನು ಕಲಿಸುತ್ತದೆ. ಎಷ್ಟೋ ಜನ ಇತ್ತೀಚಿನ ಅಧ್ಯಾಪಕರಲ್ಲಿ ಭಾಷೆಯ ಕೊರತೆಯಿಂದಾಗಿ ಯುಜಿಸಿ ನೀಡುವ ವಿಶೇಷ ಕಾರ್ಯಗಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿವಿಧ ಭಾಷೆಗಳನ್ನು ಕಲಿಯುವ ಅಗತ್ಯತೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಅಧ್ಯಾಪಕರಿಗೂ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅನುದಾನರಹಿತ ಶಾಲಾಕಾಲೇಜಿನ ರಾಜ್ಯಾಧ್ಯಕ್ಷ ಪಿ.ಎಸ್.ರಾಜಶೇಖರಮೂರ್ತಿ ರವರು ಮಾತನಾಡಿ, ಶಿಕ್ಷಕರು ಅನುಕೂಲ ಸಿಂಧುವಾಗಬಾರದು ಅವರು ಸದಾ ಜಾಗೃತರಾಗಿ ಸಮಾಜವನ್ನು ಮುನ್ನಡೆಸುವ ಕ್ರಿಯಾಶೀಲ ಮನಸ್ಸುಗಳಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಸದಸ್ಯರಾದ ನಟೇಶ್, ಉಪಪ್ರಾಂಶುಪಾಲರಾದ ರಾಜೀವ್, ಗಣೇಶ್, ನಾಗೇಂದ್ರ, ಡಾ.ಉಮೇಶ್, ಸುರೇಶ್ ರವರುಗಳು ಉಪಸ್ಥಿತರಿದ್ದರು.