ಮೈಸೂರು- 40 ದಾಟಿದವರು-ನಿಮ್ಮ- ವಯಸ್ಸನ್ನು- ಗೌರವಿಸಬೇಕು – ಹಿರಿಯ-ಶಸ್ತ್ರ- ಚಿಕಿತ್ಸಕ – ಡಾ.ಸಿ.ಜಿ.ನರಸಿಂಹನ್

ಮೈಸೂರು; ಹಠಾತ್ ಸಾವು ಯಾವಾಗಲೂ ಹೃದಯ ವೈಫಲ್ಯದಿಂದಲೇ ಆಗುತ್ತದೆ. ಹೀಗಾಗಿ 40 ವರ್ಷದ ದಾಟಿದವರೆಲ್ಲಾ ನಿಮ್ಮ ವಯಸ್ಸನ್ನು ನೀವು ಗೌರವಿಸಬೇಕು. ನಿಯಮಿತವಾಗಿ ಇಸಿಜಿ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಶಸ್ತ್ರಚಿಕಿತ್ಸಕ ಡಾ.ಸಿ.ಜಿ.ನರಸಿಂಹನ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಎಸ್‌ಡಿಎನ್‌ಆರ್‌ ವಡಿಯಾರ್‌ ಕ್ರೀಡಾಂಗಣದಲ್ಲಿ ನವೋದಯ ಕ್ರಿಕೆಟ್‌ ಕ್ಲಬ್‌ ಸಹಯೋಗದಲ್ಲಿ ನೋಸಿಸ್‌ ಸಾಫ್ಟ್‌ವೇರ್‌ ಆಯೋಜಿಸಿದ್ದ ಎರಡು ದಿನಗಳ ಡಾ.(ಕರ್ನಲ್‌) ಎಲ್‌.ಎನ್‌.ರಾಜಾ ಮೆಮೋರಿಯಲ್‌ ಲೆಜೆಂಡ್ಸ್‌ ಪ್ರೀಮಿಯರ್‌ ಲೀಗ್‌–ಟಿ10 ಕ್ರಿಕೆಟ್‌ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೃದಯಾಘಾತದಿಂದ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಕ್ರಿಕೆಟಿಗ ರವಿಕೀರ್ತಿ ಉದಾಹರಣೆ ನೀಡಿದ ಡಾ.ಸಿ.ಎನ್‌.ನರಸಿಂಹನ್‌ ಅವರು, ವಿಶ್ವ ಹೃದಯ ದಿನದಂದು ಕ್ರಿಕೆಟ್‌ ಆಡುವಾಗ ರವಿಕೀರ್ತಿ ಹೃದಯ ವೈಫಲ್ಯಕ್ಕೊಳಗಾಗಿ ಮೃತಪಟ್ಟಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರು ಹಠಾತ್‌ ಹೃದಘಾತದಿಂದ ಸಾವನ್ನಪ್ಪಿದರು. ಇಬ್ಬರ ಹೃದಯ ವೈಫಲ್ಯಕ್ಕೆ ಬೇರೆ ಕಾರಣ ಇರಬಹುದು. ಆದ್ರೆ 40 ವರ್ಷ ದಾಟಿದವರು ಆಗಾಗ ಇಸಿಜಿ ಮಾಡಿಸಿಕೊಂಡರೆ ಹೃದಯದ ಸ್ಥಿತಿಗತಿಗಳನ್ನು ತಿಳಿಯಬಹುದು. ಆ ಮೂಲಕ ಸಮಸ್ಯೆಯನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ರಣಜಿ ಟ್ರೋಫಿ, ಕರ್ನಾಟಕ ರಾಜ್ಯ ತಂಡ, ಮೈಸೂರು ವಿಭಾಗ ಮತ್ತು ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ ಸುಮಾರು 100 ಹಿರಿಯ ಕ್ರಿಕೆಟಿಗರು ಈ 2 ದಿನಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಮೈಸೂರು, ಬೆಂಗಳೂರಿನ ತಂಡಗಳು ಮತ್ತು ಕರ್ನಾಟಕದ ಉಳಿದ ಭಾಗಗಳಿಂದ ಸಂಯೋಜಿತ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿದೆ. ಪಂದ್ಯಗಳನ್ನು ಎರಡು ವಿಭಿನ್ನ ಸ್ಥಳಗಳಲ್ಲಿ ಆಡಿಸಲಾಗುತ್ತಿದೆ. SDNR ಒಡೆಯರ್ ಕ್ರೀಡಾಂಗಣ ಮತ್ತು SJCE ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್‌ ಪಂದ್ಯ ಭಾನುವಾರ ಮಧ್ಯಾಹ್ನ 2.30ಕ್ಕೆ ಎಸ್‌ಡಿಎನ್‌ಆರ್‌ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಎಸ್‌ಡಿಎನ್‌ಆರ್ ಒಡೆಯರ್ ಕ್ರೀಡಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್, ಡಾ.ಮಾಧವಿ ರಾಜಾ, ಮತ್ತು ನೋಸಿಸ್ ಸಾಫ್ಟ್‌ವೇರ್ ಸಹ ಸಂಸ್ಥಾಪಕಿ ಸ್ಮಿತಾ ಬೋಪಣ್ಣ ಬಹುಮಾನ ವಿತರಿಸುವರು.

ಕೆಎಸ್‌ಸಿಎ ಮೈಸೂರು ವಲಯದ ಸಂಚಾಲಕ ಆರ್‌.ಕೆ.ಹರಿಕೃಷ್ಣ ಕುಮಾರ್, ಕೆಎಸ್‌ಸಿಎ ಮೈಸೂರು ವಲಯದ ಅಧ್ಯಕ್ಷ ಎಸ್.ಬಾಲಚಂದರ್, ದಿವಂಗತ ಡಾ. (ಕರ್ನಲ್) ಎಲ್‌ಎನ್ ರಾಜಾ ಅವರ ಪತ್ನಿ ಡಾ.ಮಾಧವಿ ರಾಜಾ ಮತ್ತು ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಸಂಘಟನಾ ಸಮಿತಿ ಸದಸ್ಯರಾದ ಸಂಜಯ್ ರಾಜಾ, ಪ್ರಜ್ವಲ್ ರಾಜ್ ಮತ್ತು ಶ್ರೀನಿವಾಸ್ ಪ್ರಸಾದ್ ಉಪಸ್ಥಿತರಿದ್ದರು.

  • ಶಿವ ಕುಮಾರ್‌

Leave a Reply

Your email address will not be published. Required fields are marked *

× How can I help you?