ಮೈಸೂರು– ಮೈಸೂರು ಓದುಗರ ಒಕ್ಕೂಟ ಹಾಗೂ ವಾಣಿ ವಿಲಾಸ್ ಲೇಡೀಸ್ ಕ್ಲಬ್‌ನ ವತಿಯಿಂದ ಮಹಿಳೆ ಯರಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ನಾಲ್ಕು ಸುತ್ತುಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಂಜನಗೂಡು, ಪಿರಿಯಾ ಪಟ್ಟಣ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯ ಹಲವೆಡೆಯಿಂದ 38 ಮಹಿಳಾ ತಂಡಗಳು ಭಾಗವಹಿಸಿದ್ದವು. ಮೊದಲು ಲಿಖಿತ ಸುತ್ತಿನೊಂದಿಗೆ ಆರಂಭವಾದ ರಸಪ್ರಶ್ನೆ ಸ್ಪರ್ಧೆಯು, ಮೂರು ಸುತ್ತುಗಳು ಮೌಖಿಕವಾಗಿ ನಡೆಯಿತು.
ಕಠಿಣ ಪ್ರಶ್ನೆಗಳಿಂದ ಕೂಡಿದ್ದ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಬಲ ಪೈಪೋಟಿ ನಡೆಸಿದ 6 ತಂಡಗಳ ಪೈಕಿ ಎ.ಜಿ.ಮಂಜುಳಾ ಸಿಂಹ ಮತ್ತು ಬಿ.ಹೆಚ್.ಲೀಲಾವತಿ ತಂಡ ಪ್ರಥಮ ಬಹುಮಾನ ಪಡೆದರೆ, ಬಿ.ಆರ್.ನಾಗರತ್ನ ಮತ್ತು ಗಿರಿಜಾ ಸಿದ್ದಪ್ಪಾಜಿ ಅವರ ತಂಡ ದ್ವಿತೀಯ ಹಾಗೂ ಇಂದ್ರಾಣಿ ಮತ್ತು ಸುಚಿತ್ರಾ ಹೆಗಡೆ ಅವರ ತಂಡ ತೃತೀಯ ಬಹು ಮಾನ ಪಡೆಯಿತು. ಹಾಗೆಯೇ ಭಾರ್ಗವಿ ಮತ್ತು ಮನಸ್ವಿನಿ, ಗೀತಾ ಶ್ರೀಹರಿ ಮತ್ತು ಸಿ.ಆರ್. ವಿಜಯಲಕ್ಷ್ಮಿ, ನಾಗರತ್ನ ಗೋಪಿನಾಥ್ ಮತ್ತು ನಿವೇದಿತಾ ವೇಣುಗೋಪಾಲ್ ತಂಡ ಸಮಾಧಾನಕರ ಬಹುಮಾನ ಪಡೆಯಿತು.
ಪ್ರಸನ್ನ ಕುಮಾರಿ, ತುಳಸಿ ವಿಜಯ ಕುಮಾರಿ, ಕಲ್ಪನಾ ಚಂದ್ರಶೇಖರ್ ಮತ್ತು ಹೆಚ್ ನಿವೇದಿತಾ, ಡಾ. ಪಾಮೆಲಾ ಸನತ್ ನಿಕ್ಕಂ ಹಾಗೂ ಉದ್ಯಮಿ ಪಲ್ಲವಿ ಅರುಣ್ ತೀರ್ಪುಗಾರರಾಗಿದ್ದರು.

ರಸ ಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮೈಸೂರು ಬುಕ್ ಕ್ಲಬ್ ಸಂಸ್ಥಾಪಕಿ ಹಾಗೂ ಉದ್ಯಮಿ ಶುಭಾ ಸಂಜಯ್ ಅರಸ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಾಧಕ ರಾಗುತ್ತಿದ್ದು, ಸ್ಪಧಾ೯ತ್ಮಕ ಯುಗದಲ್ಲಿ ಜ್ಞಾನದ ವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕಿದೆ.
ಈ ನಿಟ್ಟನಲ್ಲಿ ಪ್ರತಿನಿತ್ಯ ದಿನಪತ್ರಿಕೆಗಳು, ಪುಸ್ತಕಗಳನ್ನು ಓದಬೇಕು. ನಿರಂತರ ಓದಿನಿಂದ ಜ್ಞಾನ ವೃದ್ದಿಯ ಜೊತೆಗೆ ಮಾನಸಿಕ ಆರೋಗ್ಯವು ಲಭಿಸುತ್ತದೆ ಎಂದು ಸಲಹೆ ನೀಡಿದರು.
ವಾಣಿವಿಲಾಸ್ ಲೇಡೀಸ್ ಕ್ಲಬ್ ನ ಕಾರ್ಯಕಾರಿ ಸಮಿತಿಯ ಪ್ರೇಮ್ ಡಿ ಸಿಲ್ವಾ, ಖಜಾಂಚಿ ವಿನಯ ಪ್ರಭಾವತಿ, ಶರ್ಲಿ ಮುದ್ದಪ್ಪ, ವಸಂತಮ್ಮ, ಮಾಲಿನಿ, ಶೈಲ ಶಂಕರ್ ವಿಜೇತರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಿದರು.