ಮೈಸೂರು:ಆಹಾರ ಮನೆಬಾಗಿಲಿಗೆ ಬರಲು ಪ್ರಾರಂಭಿಸಿದ ಬಳಿಕ ಅಡುಗೆ ಮನೆಗೆ ಬಾಗಿಲು ಹಾಕುವ ಪರಿಸ್ಥಿತಿ ಉದ್ಭವಿಸಿದೆ ಎಂದು ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
ಮೈಸೂರು ನಗರ ವಸ್ತು ಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಮಹಿಳಾ ಉದ್ಯಮಿ ಉಪಸಮಿತಿ-2024ರವತಿಯಿಂದ ಮಹಿಳೆಯರಿಗೆ ಆಯೋಜಿಸಿದ್ದ ಬೆಂಕಿ ರಹಿತ ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಅಡುಗೆಮನೆಯೇ ಅರಮನೆ ಆಗಿದೆ. ಹಿಂದೆಲ್ಲಾ ಪಕ್ಕದ ಮನೆಯ ಅಡುಗೆ ಸುಗಂಧದಲ್ಲೇ ಇಂತಹ ಅಡುಗೆ ಎಂದು ಹೇಳುವಷ್ಟರ ಮಟ್ಟಿಗೆ ಆಹಾರ ತಯಾರಾಗುತ್ತಿದ್ದವು. ಇಂದು ಅವೆಲ್ಲವೂ ನೆನಪುಗಳಾಗಿ ಉಳಿದಿವೆ ಎಂದರು.
ಇಂದು ಮಕ್ಕಳನ್ನು ಸುಮ್ಮನಿರಿಸಲು ಮೊಬೈಲ್ ಕೊಟ್ಟು ಕೂರಿಸಿ ಆನ್ ಲೈನ್ ನಲ್ಲಿ ಆಹಾರ ಬುಕ್ಕಿಂಗ್ ಮಾಡುವ ಸಂಸ್ಕೃತಿಗೆ ಬಂದು ನಿಂತಿದ್ದೇವೆ.ಇಂತಹ ಸ್ಪರ್ಧೆಗಳನ್ನ ಮತ್ತೆ-ಮತ್ತೆ ನಡೆಸುವ ಮೂಲಕ ಜನರಿಗೆ ಮತ್ತಷ್ಟು ಅರಿವು ಮೂಡಿಸುವ ಅವಶ್ಯಕಕತೆಯಿದೆ ಎಂದರು.
ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆಯಲ್ಲಿ 29 ಮಂದಿ ಭಾಗವಹಿಸಿದ್ದರು. ಈ ಪೈಕಿ ಜಿ.ಆರ್. ತಾರಕೇಶ್ವರಿ( ಪ್ರಥಮ), ಕೆ.ಎಸ್. ಕೃಪಾಲಕ್ಷ್ಮಿ(ದ್ವಿತೀಯ), ಅದಿಭಾ ಕೌಸರ್( ತೃತೀಯ) ನಗದು ಬಹುಮಾನ ಪಡೆದರು.
ಇದೇ ಸಂದರ್ಭದಲ್ಲಿ ಮಹಿಳಾ ಉದ್ಯಮಿ ಉಪಸಮಿತಿ ಅಧ್ಯಕ್ಷೆ ಪಿ.ರಾಜೇಶ್ವರಿ, ಮಾಜಿ ಮಹಾಪೌರ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಮಲ್ಲಿಗೆ ವಿರೇಶ್, ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಎಚ್.ಪಿ.ರಾಣಿಪ್ರಭ, ಮೆಹಬೂಬ್, ಭವ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘು ರಾಜೇಅರಸ್ ಇನ್ನಿತರರು ಉಪಸ್ಥಿತರಿದ್ದರು.
———––ಮಧುಕುಮಾರ್