ಮೈಸೂರು:ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜ.18 ಮತ್ತು 19ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಮಹಾಸಭಾದ ಸುವರ್ಣ ಸಂಭ್ರಮ ಮತ್ತು ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ವಿಪ್ರ ಸಮುದಾಯದ ಶ್ರೇಯೋಭಿವೃದ್ಧಿ ಸಂಬಂಧ ಹಕ್ಕೊತ್ತಾಯ ಮಂಡಿಸಿ ಸರ್ಕಾರಗಳ ಗಮನ ಸೆಳೆಯಲಾಗುತ್ತಿದ್ದು,ಹೀಗಾಗಿ ಸಮ್ಮೇಳನದಲ್ಲಿ ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಪಾಲ್ಗೊಬೇಕೆಂದು ಸಮುದಾಯದ ಮುಖಂಡರು ಕೋರಿದರು.
ಮೈಸೂರಿನ ಚಾಮುಂಡಿಪುರಂನ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆ ಮತ್ತು ವಿಪ್ರ ಸಂಘಟನಾ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು,ಮೈಸೂರು ನಗರ ಮತ್ತು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಮಾತನಾಡಿ, ವಿಪ್ರರ ಶ್ರೇಯೋಭಿವೃದ್ಧಿಗೆ ಸರ್ಕಾರಗಳಿಂದ ಇನ್ನು ಸಾಕಷ್ಟು ಯೋಜನೆಗಳು ಜಾರಿಯಾಗಬೇಕಿದೆ. ಸಮುದಾಯದ ಬಹುತೇಕ ಯುವಜನರು ನಿರುದ್ಯೋಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ.ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಂಖ್ಯೆಯೂ ಕಡಿಮೆ ಇಲ್ಲ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ನೀಡುವ ಶೇ.10ರಷ್ಟು ಮೀಸಲಾತಿ ಜಾರಿ ಸಮರ್ಪಕವಾಗಿ ಆಗುತ್ತಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಹಲವು ಹಕ್ಕೊತ್ತಾಯಗಳನ್ನು ಸಮ್ಮೇ ಳನದಲ್ಲಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಯಾವುದೇ ಕೆಲಸ ಕಾರ್ಯಗಳು ಇದ್ದರೂ ಮುಂದೂಡಿ ಸಮ್ಮೇಳನದಲ್ಲಿ ಹಾಜರಿದ್ದು, ಸಮುದಾಯ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಸೂಚಿಸಿದರು.
ಹೀಗಾಗಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ. ಇಂದು ದೇಶ ಮತ್ತು ರಾಜ್ಯದಲ್ಲಿ ಆನೇಕ ಜಾತಿಗಳು ಸಂಘಟನೆಗೊಂಡು ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಂಡಿಸುತ್ತಿವೆ. ಅಂತೆಯೇ ನಮ್ಮ ಸಮುದಾಯವೂ ಸಂಘಟನೆಯಾಗಿ ಸರ್ಕಾರದ ಗಮನ ಸೆಳೆಯಬೇಕಿದೆ ಸಮ್ಮೇಳನಕ್ಕೆ ತೆರಳಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾಜದವರು ಇದರ ಸಮಪಯೋಗ ಪಡೆಯಬೇಕೆಂದು ವಿನಂತಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯ ಉಪಾಧ್ಯಕ್ಷರಾದ ಶ್ರೀಕುಠ ಕುಮಾರ ಮಾತನಾಡಿ, 1974ರಲ್ಲಿ ಮಹಾಸಭಾ ಸ್ಥಾಪನೆ ಯಾಯಿತು. ಇದೀಗ 50 ವರ್ಷಗಳನ್ನು ಪೂರೈಸಿರುವ ಸಂತಸದ ಘಟ್ಟದಲ್ಲಿದ್ದೇವೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಈಗಾಗಲೇ 10 ಸಮ್ಮೇಳನಗಳು ನಡೆದಿವೆ. ಆ ಮೂಲಕ ಸಮುದಾಯದ ಶ್ರೇಯೋಭೀವೃದ್ಧಿಗೆ ಮಹಾಸಭಾ ಆರಂಭದಿಂದಲೂ ಶ್ರಮಿಸಿದೆ. ಮಹಾಭಾದ ಅಡಿಯಲ್ಲಿ 600ಕ್ಕೂ ಹೆಚ್ಚು ಅಂಗಸಂಸ್ಥೆಗಳು ಕಾರ್ಯನಿರ್ವಹಿ ಸುತ್ತಿವೆ. ಮಹಾಸಭಾದಲ್ಲಿ 80 ಸಾವಿರ ಅಜೀವ ಸದಸ್ಯರು ಇದ್ದು, ಮೈಸೂರು ಜಿಲ್ಲೆ ಯಲ್ಲಿ 5 ಸಾವಿರ ಸದಸ್ಯರಿದ್ದಾರೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿಸಬೇಕೆಂದು ಕೋರಿದರು.
ಮಹಾಸಭಾದ ಮತ್ತೊಬ್ಬ ರಾಜ್ಯ ಉಪಾಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ತನುಮನ ಧನ ಸಹಾಯದೊಂದಿಗೆ ಸಮು ದಾಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ಸಮಾಜದ ಸಮ್ಮೇಳನ ಎಂಬ ಅಭಿಮಾನ ಹೊಂದಬೇಕು. ಕುಟುಂಬದಲ್ಲಿ ಕೇವಲ ಒಬ್ಬರು ಇಬ್ಬರಷ್ಟೇ ಪಾಲ್ಗೊಂಡರೆ ಸಾಲದು. ಇಡೀ ಕುಟುಂಬವೇ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆದ್ಯತೆ ನೀಡಬೇಕು ಆ ಮೂಲಕ ಸಮುದಾಯದ ಶಕ್ತಿ ಪ್ರದರ್ಶನವಾಗಬೇಕು. ರಾಷ್ಟ್ರದಾದ್ಯಂತ ಇರುವ ನಮ್ಮ ಸಮುದಾಯದ ಜನಪ್ರತಿನಿಧಿ ಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಇಡೀ ಸಮುದಾಯ ಒಗ್ಗಟ್ಟಿ ನಿಂದ ಸಮ್ಮೇಳನಕ್ಕೆ ಬರಬೇಕು ಎಂದರು.
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಮಾತನಾಡಿ, ಮಹಾಸಭಾದ ಸುವರ್ಣ ಸಂಭ್ರಮದಲ್ಲಿ ಭಾಗವಹಿಸಲು ಸುವರ್ಣಾವಕಾಶ ಬಂದಿದ್ದು, ಇದನ್ನು ಸಮುದಾಯದವರು ಮನಗಂಡು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಸಮುದಾಯದ ತ್ರಿಮತಸ್ಥರ ಒಗ್ಗಟ್ಟು ಪ್ರದರ್ಶನಗೊಳ್ಳ ಬೇಕು ಎಂದು ಹೇಳಿದರು.
ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ,ವಿಪ್ರರಲ್ಲಿ ಈಗ ಸಂಘಟನಾ ಮನೋಭಾವ ಬಂದಿದೆ. ಆದರೆ ಅದು ಇನ್ನಷ್ಟು ಆಗಬೇಕಿದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯದ ಕುಟುಂಬಗಳನ್ನು ಮೇಲೆತ್ತುವ ಕೆಲಸ ಸಹ ಆಗಬೇಕಿದೆ. ವಿಶೇಷ ವಾಗಿ ಯುವ ಜನರಲ್ಲಿ ಸಮುದಾಯದ ಅಭಿಮಾನ ಮೂಡಬೇಕು. ಕೆಆರ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಜನಸಂಖ್ಯೆಯನ್ನು ಬ್ರಾಹ್ಮಣ ಸಮುದಾಯ ಹೊಂದಿದೆ. ಹಾಗಾಗಿ ಇಂತಹ ಸಂಘಟನಾ ಕಾರ್ಯಕ್ರಮಗಳಲ್ಲಿ ಇನ್ನು ಹೆಚ್ಚಿನ ಬಂಧುಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮೇಲುಕೋಟೆಯ ವಂಗೀಪುರ ನಂಜ ಮಠದ ಇಳ್ಳೆಆಳ್ವಾರ್ ಸ್ವಾಮೀಜಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಎಂ.ಡಿ.ಪಾರ್ಥ ಸಾರಥಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಪುಷ್ಟ ಅಯ್ಯಂಗಾರ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಕೆಆರ್ಎಸ್ ಗ್ರಾಪಂ ಸದಸ್ಯ ವಿಜಯಕುಮಾರ್, ಸಮುದಾಯದ ಇನ್ನಿತರ ಮುಖಂಡರಾದ ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಕೆ.ಎಂ ನಿಶಾಂತ್, ಅರ್ಚಕ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಅಜಯ್ಶಾಸ್ತ್ರಿ, ಜಯಸಿಂಹ, ಚಕ್ರಪಾಣಿ, ಅರುಣ್, ಜಿ.ಕೆ.ಪುನೀತ್, ಕಡಕೋಳ ಜಗದೀಶ್, ಸಚಿಂದ್ರ, ಚಕ್ರಪಾಣಿ,ಮತ್ತಿತರರು ಹಾಜರಿದ್ದರು.
—————-—–ಮಧುಕುಮಾರ್