ಮೈಸೂರು-ಪವಿತ್ರ ಜ್ಯೂಬಿಲಿ 2025-ಡಾ.ಬರ್ನಾರ್ಡ್ ಮೊರಾಸ್ ರಿಂದ ಚಾಲನೆ-ವರ್ಷಪೂರ್ತಿ ನಡೆಯಲಿರುವ ಆಚರಣೆ

ಮೈಸೂರು-ಯೇಸುಕ್ರಿಸ್ತನ ಜನನದ ಸವಿನೆನಪಿಗಾಗಿ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಪ್ರತಿ 25 ವರ್ಷಗಳಿಗೊಮ್ಮೆ ಆಚರಿಸುವ “ಪವಿತ್ರ ಜ್ಯೂಬಿಲಿ 2025 ಕ್ಕೆ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಭಾನುವಾರ ಧಾರ್ಮಿಕ ವಿಧಿ-ವಿಧಾನ ಹಾಗೂ ಭಕ್ತಿ- ಭಾವದೊಂದಿಗೆ ನೆರವೇರಿತು.

ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಹಾಗೂ ನಿವೃತ್ತ ಧರ್ಮಾಧ್ಯಕ್ಷರೂ ಆದ ಡಾ.ಬರ್ನಾರ್ಡ್ ಮೊರಾಸ್ ಪವಿತ್ರ ಜ್ಯೂಬಿಲಿ 2025ರ ಪವಿತ್ರ ಸಂದೇಶ ಬೈಬಲ್‌ನಲ್ಲಿ ಉಲ್ಲೇಖ ವಾಗಿದೆ ಎಂದರಲ್ಲದೆ, ಕ್ಯಾಥೋಲಿಕ್ ಚರ್ಚ್‌ನ ಇತಿಹಾಸದಲ್ಲಿ ಕ್ರಿ.ಶ.1300 ರಿಂದಲೂ ಪ್ರತಿ 25 ವರ್ಷಗಳಿಗೊಮ್ಮೆ ಜ್ಯೂಬಿಲಿಯನ್ನು ಯೇಸುಕ್ರಿಸ್ತರ ಜನನದ ನೆನಪಿಗಾಗಿ ಆಚರಿಸುವ ಸತ್ ಸಂಪ್ರದಾಯ ಆಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಚರ್ಚ್ ನಲ್ಲೂ ಯೇಸು ಕ್ರಿಸ್ತ ರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ ಎಂದು ಯೇಸುಕ್ರಿಸ್ತರ ಅನುಯಾಯಿಗಳಿಗೆ ಧರ್ಮ ಸಂದೇಶ ನೀಡಿದರು.

ಡಿ.24ರಂದೇ ರೋಮ್‌ ನಗರದಲ್ಲಿ ಸೇಂಟ್ ಪೀಟರ್ ಬೆಸಿಲಿಕಾದ ಪವಿತ್ರ ಬಾಗಿಲನ್ನು ತೆರೆಯುವ ಮೂಲಕ ಪೋಪ್ ಫ್ರಾನ್ಸಿಸ್ ಅವರು 2025ರ ಜ್ಯೂಬಿಲಿ ವರ್ಷಕ್ಕೆ ಚಾಲನೆ ನೀಡಿದ್ದರು. ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ 2025ಕ್ಕೆ ‘ಭರವಸೆಯ ಯಾತ್ರಿಕರು’ ಧೈಯವಾಕ್ಯ ಘೋಷಿಸಿ, ಯೇಸುಕ್ರಿಸ್ತನಿಗೆ ವಿಶೇಷ ಬಲಿಪೂಜೆ ನೆರವೇರಿಸಿದ್ದಾರೆ. ಯೇಸುಕ್ರಿಸ್ತರ ಸಮಸ್ತ ಯಾತ್ರಿಕರಿಗೂ ಮಂಗಳವನ್ನುಂಟು ಮಾಡಲಿ ಎಂದು ಧರ್ಮ ಸಂದೇಶ ನೀಡಿದರು. ಈ ವೇಳೆ ಯೇಸುಕ್ರಿಸ್ತನ ಕುರಿತಾದ ಅನೇಕ ಭಜನ್‌ಗಳನ್ನು ನುರಿತ ಗಾಯಕರ ತಂಡ ಮನೋಜ್ಞವಾಗಿ ಹಾಡಿ, ಭಕ್ತರ ಮನ ಸೆಳೆದರು.

ಇದಕ್ಕೂ ಮುನ್ನ ಬನ್ನಿಮಂಟಪದ ಬೆಂಗಳೂರು- ಮೈಸೂರು ರಸ್ತೆಯ ದೀನರ ಮಾತೆಯ ಆರಾಧನಾಲಯದಲ್ಲಿ ಜ್ಯುಬಿಲಿ ಆಚರಣೆಗೆಂದೇ ಧರ್ಮಕ್ಷೇತ್ರ ದಿಂದ ಮರದಲ್ಲಿ ತಯಾರಿಸಿದ 8 ಅಡಿ ಎತ್ತರದ ವಿಶೇಷ ಶಿಲುಬೆಯನ್ನು ಸೇಂಟ್ ಫಿಲೋಮಿನಾ ಚರ್ಚ್ ವರೆಗೆ ಮೆರವಣಿಗೆಯಲ್ಲಿ ಭಕ್ತಿ- ಭಾವದಿಂದ ತರಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೈಸ್ತ ಸಮುದಾಯದ ನೂರಾರು ಭಕ್ತರು, ಯೇಸು ಕ್ರಿಸ್ತರ ಕುರಿತಾದ ಭಕ್ತಿ ಗೀತೆಗಳನ್ನು ಹಾಡುತ್ತಾ “ಭರವಸೆಯ ಯಾತ್ರಿಕರು ನಾವು ” ಎಂಬ ಧ್ಯೇಯವಾಕ್ಯದೊಂದಿಗೆ ಹೆಜ್ಜೆ ಹಾಕಿದರು.

ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ.ಬರ್ನಾರ್ಡ್ ಮೊರಾಸ್ ಅವರು 8 ಅಡಿ ಎತ್ತರದ ಯೇಸುಕ್ರಿಸ್ತನ ಶಿಲುಬೆಗೆ ವಿಶೇಷ ಪೂಜೆ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಜಿಲ್ಲೆ ಬೇರೆ ಚರ್ಚ್‌ಗಳ ಪಾದ್ರಿಗಳು, ಚರ್ಚ್‌ನ ಕ್ಯಾಥೋಲಿಕ್ ಸಮುದಾಯದ ಯುವಜನರು ಕ್ರೈಸ್ತ ಸಮುದಾಯದ ಧಾರ್ಮಿಕ ವಸ್ತ್ರ ಧರಿಸಿ ಧೂಪ. ದೀವಟಿಗೆಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಯೇಸುಕ್ರಿಸ್ತನ ಜೀವನವನ್ನು ಸಾರುವ ದೃಶ್ಯಗಳನ್ನು ಮರುಸೃಷ್ಟಿಸಿದ ಪ್ರಸಂಗಗಳು ಮೆರವಣಿಗೆ ಯಲ್ಲಿ ಸಾರ್ವಜನಿಕರ ಗಮನ ಸೆಳೆದವು.

ಗಮನ ಸೆಳೆದ ಸ್ತಬ್ಧಚಿತ್ರ

ಮೆರವಣಿಗೆ ಯಲ್ಲಿ ಪ್ರೀತಿಯನ್ನು ಹರಡಲು ಪ್ರೀತಿಯ ಜನ್ಮವನ್ನು ಸ್ಮರಿಸಿಕೊಂಡ, ಆಸ್ಥಿತೆಯ ಸಂತ ಫ್ರಾನ್ಸಿಸ್ ಸಂದೇಶ ಸಾರುವ ಜಗತ್ತಿನ ಪ್ರಪ್ರಥಮ ಗೋದಲಿ ಸ್ತಬ್ಧಚಿತ್ರ, ಹವಾಮಾನ ಬದಲಾವಣೆ ಮತ್ತು ಯುದ್ಧಗಳು ಮುಕ್ತವಾಗಿ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಉತ್ತೇಜಿಸುವ ಹಾಗೂ ಪೋಪ್‌ನ ಧ್ಯೇಯವಾಕ್ಯ ಬಿಂಬಿಸುವ ಸ್ತಬ್ಧ ಚಿತ್ರ ಹಾಗೂ ಪ್ರಾರ್ಥನೆ,ತಪಸ್ಸು,ಕ್ಷಮೆ ಮತ್ತು ಸಾಮರಸ್ಯ ಧ್ಯೇಯವಾಕ್ಯ ದೊಂದಿಗೆ 8 ಅಡಿ ಎತ್ತರದ ಯೇಸು ಕ್ರಿಸ್ತನ ಶಿಲುಬೆ ಮೆರವಣಿಗೆಯಲ್ಲಿ ಜನರ ಗಮನ ಸೆಳೆದವು.

ಸೇಂಟ್ ಫಿಲೋಮಿನಾ ಚರ್ಚ್ ಆವರಣಕ್ಕೆ ತರಲಾದ ಶಿಲುಬೆಗೆ ಮೊರಸ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಬಳಿಕ ಬಲಿ ಪೂಜೆಗಳು ಆರಂಭವಾದವು. ಆವರಣದಲ್ಲಿ ಹಾಕಲಾಗಿದ್ದ ಆಸನಗಳು ಭರ್ತಿಯಾಗಿದ್ದವು. ಡಿಜಿಟಲ್ ಪರದೆಗಳ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಚರ್ಚ್ ಹೊರಭಾಗದ ಗೇಟ್, ಕಾಂಪೌಂಡ್, ಬಳಿ ನಿಂತು ಕಣ್ತುಂಬಿ ಕೊಂಡ ಪ್ರಸಂಗ ಪವಿತ್ರ ಜ್ಯೂಬಿಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವರ್ಷಪೂರ್ತಿ ಆಚರಣೆ

ಯೇಸು ಕ್ರಿಸ್ತರ ತ್ಯಾಗದ ಸಂಕೇತವೂ ಭರವಸೆಯ ಸಂಕೇತವೂ ಆದ ವಿಶೇಷ ಶಿಲುಬೆಯನ್ನು ಧರ್ಮ ಕ್ಷೇತ್ರದಿಂದ ಎಲ್ಲಾ ಚರ್ಚ್ ಗಳಿಗೂ ಪ್ರದರ್ಶನಗೊಳ್ಳಲಿದೆ.ಈ ವರ್ಷ ಪೂರ್ತಿ ಈ ಕಾರ್ಯಕ್ರಮವು ನಡೆಯಲಿದ್ದು, ಎಲ್ಲೆಡೆ ಜ್ಯುಬಿಲಿ 2025ರ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಆಚರಣೆಗೆ ಸಾಕ್ಷಿಯಾಗಲಿದೆ.

ಈ ವೇಳೆ ಸೇಂಟ್ ಫಿಲೋಮಿನಾ ಚರ್ಚ್ ನ ಪ್ರಧಾನ ಗುರು ಸ್ಟ್ಯಾನ್ಲಿ ಅಲ್ಮೇಡಾ, ಹಾಗೂ ಮೈಸೂರು ಧರ್ಮ ಕ್ಷೇತ್ರದ ಪಾಕಿಯ ರಾಜ್, ಕೋಶಾಧಿಕಾರಿ ಸಬಾಸ್ಟಿನ್ ಮತ್ತು ಫಾ. ಜೋಸೆಫ್ ಮರಿ ಹಾಗೂ ಫಾ. ಪೀಟರ್ ಸೇರಿದಂತೆ ಕ್ರೈಸ್ತ ಧರ್ಮಗಳು ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

———–ಮಧುಕುಮಾರ್

Leave a Reply

Your email address will not be published. Required fields are marked *

× How can I help you?