ಮೈಸೂರು-ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರು ಹಾಗೂ ಕನ್ನಡ ನಾಡನ್ನು ಕಟ್ಟಿ ಬೆಳೆಸಿದವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ನಮ್ಮ ಮುಂದಿನ ಪೀಳಿಗೆ ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ಮೊದಲು ಈ ನೆಲದ ಇತಿಹಾಸವನ್ನು ಅರಿಯುವಂತಹ ಪಠ್ಯಕ್ರಮವನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಆರ್. ರಘು (ಕೌಟಿಲ್ಯ) ಕರೆ ನೀಡಿದರು.
ಅವರು ಕರ್ನಾಟಕ ಸೇನಾ ಪಡೆ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಮಹೋತ್ಸವದ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆಯ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಾಮರಸ್ಯದ ಹೆಸರಿನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಳ್ಳದೇ ಇತಿಹಾಸದಲ್ಲಿ ಸಾಕಷ್ಟು ತ್ಯಾಗ ಮಾಡಿದೆ. ಗಡಿ ಪ್ರದೇಶಗಳಲ್ಲಿ ಉದಕಮಂಡಲ(ಊಟಿ), ಕಾಸರಗೋಡು, ಹೊಸೂರು, ನಿಪ್ಪಾಣಿ, ಮೊದಲಾದ ಅಚ್ಚ ಕನ್ನಡ ಪ್ರದೇಶಗಳನ್ನು ರಾಜಕೀಯ ಹಿತಾಸಕ್ತಿ ಇಲ್ಲದೇ ಕಳೆದುಕೊಂಡಿತು, ಈಗಲಾದರೂ ಕನ್ನಡ ಸಂಸ್ಕೃತಿ ಉಳಿಸಿಕೊಳ್ಳಲು ಎಚ್ಚೆತ್ತುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ನಮ್ಮ ಮೇಲೆ ಬ್ರಿಟಿಷರು ಇಂಗ್ಲೀಷ್ ಹೇರಿದರೆ, ಉತ್ತರ ಭಾರತದವರು ಹಿಂದಿ ಭಾಷೆಯನ್ನು ಹೇರುತ್ತಿದ್ದಾರೆ. ರಾಷ್ಟ್ರಭಾಷೆಯ ಕಲ್ಪನೆಯಿಲ್ಲದ ಕೆಲವರು ಕನ್ನಡವೂ ಹಿಂದಿಯಷ್ಟೇ ಮಾನ್ಯತೆ ಹೊಂದಿರುವ ರಾಷ್ಟ್ರ ಭಾಷೆ ಎಂಬ ವಾಸ್ತವ ಸ್ಥಿತಿ ಅರಿತುಕೊಂಡಿಲ್ಲ. ಹಲವು ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ ಆದರೆ ವ್ಯವಸ್ಥಿತವಾಗಿ ಅನ್ಯ ಭಾಷೆಯ ಹೇರಿಕೆಯನ್ನು ನಾವು ಸಹಿಸಿಕೊಂಡು ಕುಳಿತುಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳುವುದೇ ಆದರೆ ನಮ್ಮ ಗಡಿ ರಾಜ್ಯದ ಭಾಷೆಗಳನ್ನು ಕಲಿಯುವುದರಿಂದ ಒಕ್ಕೂಟ ವ್ಯವಸ್ಥೆ ಹಾಗೂ ಗಡಿ ಭಾಗದ ಸೌಹಾರ್ದತೆ ಕಾಯ್ದುಕೊಳ್ಳಲೂ ಅನುಕೂಲವಾಗುತ್ತದೆ. ಇದರ ಜೊತೆಜೊತೆಗೇ ವ್ಯವಹಾರಿಕವಾಗಿಯೂ ಗಡಿ ರಾಜ್ಯದೊಂದಿಗೆ ಸಂಬಂಧಗಳು ಸುಧಾರಿಸುತ್ತದೆ. ಇದು ವೈಜ್ಞಾನಿಕವಾಗಿ ಒಪ್ಪಿಕೊಳ್ಳಬಹುದಾದ ಸೂತ್ರ ಎಂದು ಅವರು ಹೇಳಿದರು.
ಹಳೆಯ ಮೈಸೂರು ಸಂಸ್ಥಾನ ಕಟ್ಟಿದ ನಮ್ಮ ಮೈಸೂರು ಮಹಾರಾಜರ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಚಾರವೆಸಗಲಾಗಿದೆ. ಇನ್ನು ಮುಂದಾದರೂ ಈ ಲೋಪ ಸರಿಪಡಿಸುವ ಕಾರ್ಯ ಆಗಲೇಬೇಕಿದೆ. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಲು ನಮ್ಮಿಂದ ಆಗಿಲ್ಲ ಎಂದರೆ ನಾವೆಷ್ಟು ಆತ್ಮವಂಚನೆಯಿಂದ ನಡೆದುಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ. ಮಾನಸಗಂಗೋತ್ರಿಗೆ 800 ಎಕರೆ ಧಾರೆ ಎರೆದ ರಾಜಮನೆತನವನ್ನು ನಾವೆಷ್ಟು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದೂ,ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎನ್ನುವುದಾದರೆ ಮೈಸೂರು ಬಾಗವನ್ನು ಹಳೆಯ ಮೈಸೂರು ಎಂದು ಏಕೆ ಸಂಬೊಂಧಿಸಬೇಕು? ನಾಲ್ವಡಿ ಮೈಸೂರು ಎಂದು ಏಕೆ ಕರೆಯಬಾರದೆಂದು ಸಲಹೆ ಮುಂದಿಟ್ಟರು. ಕರ್ನಾಟಕ ಸೇನಾ ಪಡೆ ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್. ಟಿ ಜವರೇಗೌಡ ,ಕೆ.ವಿ.ಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞರಾದ ಡಾ. ನಂದೀಶ್ ಕುಮಾರ್ ಕೆ ಸಿ, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಿ ಬಸಪ್ಪ, ಕರ್ನಾಟಕ ಚಲನಚಿತ್ರ ನಿರ್ಮಾಪಕರು ಹಾಗೂ ಕೆ.ಪಿ.ಸಿ.ಸಿ ಕಾರ್ಯದರ್ಶಿಯಾದ ವರುಣಾ ಮಹೇಶ್ , ಕರ್ನಾಟಕ ತೆಂಗಿನ ನಾರಿನ ಅಭಿವೃದ್ಧಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ ಹೆಚ್ ಗೋವಿಂದೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ ಬಿ ಲಿಂಗರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಆಲತ್ತೂರು ಜಯರಾಮ್, ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ನಿರ್ದೇಶಕರಾದ ಎ ಕುಮಾರ್, ಉಮ್ಮತ್ತೂರು ವೀರಗಾಸೆ ಕಲಾವಿದರಾದ ಎಂ ಜಯ ಕುಮಾರ್ ರವರಿಗೆ ‘ಕರ್ನಾಟಕ ಸುವರ್ಣ ಸಂಭ್ರಮ ಸೇವಾ ಪ್ರಶಸ್ತಿ’ ಪ್ರಧಾನ ಮಾಡಲಾಯಿತು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಮಾರು ಐವತ್ತು ವಿದ್ಯಾರ್ಥಿನಿಯರಿಗೆ ಕೆ.ಪಿ.ಸಿ.ಸಿ ಸದಸ್ಯರಾದ ಆರ್ ಜೇಸುದಾಸ್ ರವರು ಪ್ರತಿಭಾ ಪುರಸ್ಕಾರ ಮಾಡಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಂಸ್ಕೃತಿ ಪೋಷಕರಾದ ಡಾ. ರಘುರಾಮ್ ಕೆ ವಾಜಪೇಯಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ ಶ್ರೀನಿವಾಸ ಗೌಡ, ಪ್ರಭುಶಂಕರ್, ಪ್ರೊ. ರಮೇಶ್ ಬಾಬು, ಕೃಷ್ಣಪ್ಪ, ನಾಗರಾಜು, ಶಿವಲಿಂಗಯ್ಯ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಹನುಮಂತಯ್ಯ, ಭಾಗ್ಯಮ್ಮ, ಪ್ರಭಾಕರ್, ಲಕ್ಷ್ಮೀ , ಭಾಗ್ಯಮ್ಮ, ಬೇಬಿ ರತ್ನ, ರಘು ಅರಸ್, ಕುಮಾರ್, ಗಣೇಶ್ ಪ್ರಸಾದ್, ರವೀಶ್, ವಿಷ್ಣು, ವಿಜಯೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
——–-ಮಧುಕುಮಾರ್