ಮೈಸೂರು-ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಮಕ್ಕಳ ದಸರಾ ಕಲಾಥಾನ್”ಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಡನೆ ಮಾತನಾಡಿದ ಸಚಿವರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಿವಿಧ ಶಾಲೆಗಳಿಂದ ಸಾವಿರಕ್ಕಿಂತ ಹೆಚ್ಚು ಮಕ್ಕಳು ಸೇರಿ ಇದೇ ಮೊದಲ ಬಾರಿಗೆ ಕಲಾಥಾನ್ ನಡೆಸಲಾಗುತ್ತಿದೆ. ಮಕ್ಕಳ ಸಾಂಸ್ಕೃತಿಕ ಅಭಿರುಚಿಯನ್ನು ಅಭಿವ್ಯಕ್ತ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಸಾಂಸ್ಕೃತಿಕ ನಾಯಕತ್ವ ಹಾಗೂ ಬಹುತ್ವವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಮೈಸೂರಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಅದಕ್ಕೆ ತಕ್ಕಂತೆ ನಗರಲ್ಲಿ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ಅಚ್ಚುಕಟ್ಟಾಗಿ ಜರುಗುತ್ತಿವೆ.ವಸ್ತು ಪ್ರದರ್ಶನದಲ್ಲಿ ಬಹುತೇಕ ಮಳಿಗೆಗಳು ಪೂರ್ಣಗೊಂಡಿವೆ. ಜಿಲ್ಲಾಡಳಿವು ವ್ಯವಸ್ಥಿತವಾಗಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ದಸರಾ ಆಚರಣೆಗೆ ನಮ್ಮ ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಕೈಜೋಡಿಸಿ ಅಗತ್ಯ ಸಹಕಾರ ನೀಡಿದ್ದಾರೆ. ಈ ದಸರಾ ಆಚರಣೆಯ ಸಂದೇಶವನ್ನು ರಾಷ್ಟ್ರವ್ಯಾಪಿ ಪಸರಿಸಲಿದ್ದೇವೆ. ನಮ್ಮ ಸಂಸ್ಕೃತಿ, ಬಹುತ್ವ, ಆಚಾರ, ವಿಚಾರವನ್ನು ಈ ಮೂಲಕ ಸಾರಲಿದ್ದೇವೆ ಎಂದು ಹೇಳಿದರು.
ಗಮನ ಸೆಳೆದ ಮಕ್ಕಳ ವೇಷಭೂಷಣ
ಬಸವಣ್ಣ, ರಾಣಿ ಚೆನ್ನಮ್ಮ, ಓನಕೆ ಓಬವ್ವ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂದೀಜಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ್ದ ಮಕ್ಕಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಇದರ ಜೊತೆಗೆ ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ನೃತ್ಯ, ಕಂಸಾಳೆ ನೃತ್ಯ, ಗಾರುಡಿ ಗೊಂಬೆ, ಹುಲಿವೇಷ, ವೀರಗಾಸೆ, ಬ್ಯಾಂಡ್ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ, ಪರಿಸರ ಸಂರಕ್ಷಣೆ ವಿಷಯಗಳನ್ನೊಳಗೊಂಡ ವೈವಿಧ್ಯಮಯ ವೇಷಭೂಷಣದಲ್ಲಿ ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿದರು.
ಸಚಿವರೂ ಕೂಡ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀವತ್ಸ ಅವರು ಸೇರಿದಂತೆ ಇನ್ನಿತರು ಇದ್ದರು.
——————–-ಮಧುಕುಮಾರ್