ಮೈಸೂರು- ತಳ ಹಾಗೂ ವಂಚಿತ ಸಮುದಾಯಗಳಿಗೆ ಅಧಿಕಾರ ಸಿಕ್ಕಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ ಆದ್ದರಿಂದ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮೀನುಗಾರರ ನೀತಿಯನ್ನು ಜಾರಿ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ವತಿಯಿಂದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಸಂವಾದ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳನ್ನು ಗುರುತಿಸುವ ಕೆಲಸವನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡುತ್ತಿದೆ.ಸಾಮಾಜಿಕ ನ್ಯಾಯದ ಹರಿಕಾರರಾದ ದೇವರಾಜ ಅರಸು ಅವರ ಆಸೆ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ಸಮಾಜದ ಮುನ್ನೆಲೆಗೆ ಬಂದು ಜೀವನ ನಡೆಸಬೇಕು ಎಂಬುದಾಗಿತ್ತು.ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗಕ್ಕೆ ವಿಶೇಷವಾದ ಮನ್ನಣೆ ನೀಡಿದ್ದು ಇದರ ಜಿಲ್ಲಾಧ್ಯಕ್ಷರಾದ ಸಿದ್ದಯ್ಯನವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೀನುಗಾರರಿಗೆ ಹಲವಾರು ಸಂಕಷ್ಟಗಳಿವೆ. ಮೀನುಗಾರಿಕೆ ಆಧುನಿಕರಣ ಗೊಂಡಂತೆ ಅದರ ವಿಸ್ತಾರ ಮತ್ತು ವ್ಯಾಪ್ತಿಯು ಅಗಾಧವಾಗಿ ಬೆಳೆಯುತ್ತಿದ್ದು ಇದರ ಉಪಯೋಗಗಳು ನಿಜವಾದ ಮೀನುಗಾರರು ಪಡೆದುಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.
ಕಳೆದ ವರ್ಷದ ಬಜೆಟ್ ಅಲ್ಲಿ ಮೀನುಗಾರರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಹಲವಾರು ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಮೀನುಗಾರರಿಗೆ ನೀಡಿದ್ದಷ್ಟು ಉತ್ತೇಜನವನ್ನು ಯಾವ ಪಕ್ಷವೂ ನೀಡಲಿಲ್ಲ ಎಂದು ತಿಳಿಸಿದರು.ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಮೀನುಗಾರರ ವಿಭಾಗವನ್ನೇ ತೆರೆದಿದ್ದು ಇದು ಬೇರಾವ ಪಕ್ಷದಲ್ಲೂ ಕಾಣ ಸಿಗುವುದಿಲ್ಲ ಎಂದು ನುಡಿದರು.
ಸಂವಾದ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಒಳನಾಡು ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಸಿದ್ದಲಿಂಗರಾಜು ಅವರು ಮಾತನಾಡಿ, ಮೀನುಗಾರರಿಗೆ ಹಲವಾರು ಸಮಸ್ಯೆಗಳಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕೆ ಮಾಡಲು ಯಾವುದೇ ನಿರ್ದಿಷ್ಟ ಜಾತಿಯಲ್ಲಿ ಹುಟ್ಟಬೇಕಾಗಿಲ್ಲ ಯಾರು ಬೇಕಾದರೂ ಇದನ್ನು ಮುಕ್ತವಾಗಿ ಮಾಡಬಹುದು.ಬಂಡವಾಳಶಾಹಿಗಳ ಆರ್ಭಟದಿಂದ ಬಡ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳ ದುರುಪಯೋಗವಾಗುತ್ತಿದ್ದು ಸಹಕಾರ ಸಂಘಗಳ ಅವ್ಯವಹಾರದಿಂದ ಒಬ್ಬರ ಹಿತಕ್ಕಾಗಿ ಎಲ್ಲರು ನಾಶವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ,ಕಾಂಗ್ರೆಸ್ ಸರ್ಕಾರ ಹೆಚ್ಚು ಶೋಷಿತರ ಪರವಾಗಿ ಇದ್ದು ಮೀನುಗಾರರಿಗೆ ಹಲವಾರು ಸವಲತ್ತುಗಳನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.
ಆದರೆ ಸರ್ಕಾರ ನೀಡುತ್ತಿರುವ ಬಲೆಗಳು, ದೊಣಿಗಳು ಉಳ್ಳವರ ಪಾಲಾಗುತ್ತಿವೆ. ಪ್ರಭಾವ ಬಳಸಿ ಬಡ ಮೀನುಗಾರರಿಗೆ ಮೋಸ ಮಾಡುತ್ತಿದ್ದು ಒಳನಾಡು ಮೀನುಗಾರಿಕೆ ಬಹಳ ಕಷ್ಟವಾಗಿದ್ದು ಸ್ಥಳೀಯ ಶಾಸಕರ ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡರು. ಇದರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಬಿ ಸುಣಗಾರ್ ಮಾತನಾಡಿ, ಮೀನುಗಾರಿಕೆ ದೇಶಕ್ಕೆ 2 ನೆ ಬೆನ್ನೆಲುಬು.ಇಂದಿನ ದಿನಗಳಲ್ಲಿ ಮೀನುಗಾರರು ಆರ್ಥಿಕ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದು ಇವರನ್ನು ಸಮಾಜದ ಮುನ್ನಡೆಗೆ ತರುವುದೇ ನಮ್ಮ ಈ ಘಟಕದ ಉದ್ದೇಶ. ಎಂಮೀನುಗಾರಿಕೆ ಸಮುದಾಯಕ್ಕೆ ಒಂದು ಸುಧೀರ್ಘ ಇತಿಹಾಸ ಇದೆ ಪ್ರಪಂಚದ ಅತಿ ಹಿರಿಯವೃತ್ತಿಗಳಲ್ಲಿ ಮೀನುಗಾರಿಕೆ ಅಗ್ರಸ್ಥಾನದಲ್ಲಿ ಇದೆ.ಆದರೆ ಇದಕ್ಕೆ ಇಂದು ಬಹಳ ದುಸ್ಥಿತಿ ಬಂದೊದಗಿದೆ ಎಂದು ನುಡಿದರು.
ಕರಾವಳಿ ಭಾಗದಲ್ಲಿ ಹೆಚ್ಚು ಮೀನುಗಾರಿಕೆ ನಡೆಯುವುದಕ್ಕಿಂತ ಒಳನಾಡು ಪ್ರದೇಶದಲ್ಲಿ ಹೆಚ್ಚು ವ್ಯವಹಾರ ನಡೆಯುತ್ತದೆ ಎಂಬ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷರಾದ ಎಸ್ ಸಿದ್ದಯ್ಯ, ಡಿಸಿಸಿ ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ ಶಿವಪ್ರಸಾದ್ ಹಾಗೂ ಉತನಹಳ್ಳಿ ಶಿವಣ್ಣ, ಡಿಸಿಸಿ ಕಾರ್ಯದರ್ಶಿಗಳಾದ ಎನ್ ಲಕ್ಷ್ಮಣ್ , ಎನ್ ಆರ್ ಎಂ ಮಂಜು, ಸಾ ಮಾ ಯೋಗೇಶ್ , ಜವರೇಗೌಡ, ಪ್ರವೀಣ್ ಸಿದ್ದಲಿಂಗಪುರ ಇದ್ದರು.
——————–—ಮಧುಕುಮಾರ್