ಮೈಸೂರು-‘ನಟನ’ದಲ್ಲಿ ಈ ಭಾನುವಾರ ‘ಕಣಿವೆಯ ಹಾಡು’ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ,ಗುಲಾಮರಾಗುತ್ತ ಹೋಗುವ ಮೂಲ ನಿವಾಸಿಗಳ ಬದುಕಿನ ಚಿತ್ರಣ

ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು,ಇದೇ ನವೆಂಬರ್ 10ರಂದು ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯ ಹಾಡು’ ನಾಟಕವು ಪ್ರದರ್ಶನಗೊಳ್ಳಲಿದೆ.

ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ.

ನಟನದ ಶ್ರೀ ಮೇಘ ಸಮೀರ ಮತ್ತು ದಿಶಾ ರಮೇಶ್ ಅವರು ಅಭಿನಯಿಸುತ್ತಿದ್ದು ನಾಡಿನ ಹೆಸರಾಂತ ರಂಗತಜ್ಞ ಡಾ. ಶ್ರೀಪಾದ್ ಭಟ್ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.

ನಾಟಕದ ಕುರಿತು:

ಮೂಲತಃ ಧಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲಾ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು.

ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ .ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ.

ರಂಗತಜ್ಞ ಡಾ. ಶ್ರೀಪಾದ್ ಭಟ್

ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ.ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕ, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸುತ್ತಾನೆ.

ಕಣಿವೆಯ ಹಾಡು-ನಮ್ಮ ಎದೆಗಳಲ್ಲಿ ಮಾತ್ರವಲ್ಲದೆ, ಬುದ್ಧಿಯಲ್ಲೂ ರಿಂಗುಣಿಸುವುದು ಹೀಗೆ

ದಕ್ಷಿಣ ಆಫ್ರಿಕದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ನನ್ನಲ್ಲಿ ಅಸಾಧ್ಯ ನೋವಿದೆ, ಸಿಟ್ಟಿದೆ. ಆದರೆ ನನ್ನ ಬರವಣಿಗೆಯ ಶಕ್ತಿ ಪ್ರೀತಿ ಮಾತ್ರ. ನಾನು ನನಗಿರುವ ಸಿಟ್ಟಿನ ಕಾರಣಗಳನ್ನು ಪ್ರೀತಿಗೆ ಹೇಳಿದ್ದೇನೆ. ಅದು ಕೃತಿ ರಚಿಸುತ್ತದೆ

ಅತೋಲ್ ಫ್ಯೂಗಾರ್ಡ್.

ರಂಗಾಸಕ್ತರಿಗೆ ಆತ್ಮೀಯ ಸ್ವಾಗತ.ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ.

ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.

ನಟನ ಮುಖ್ಯಸ್ಥ ಮಂಡ್ಯ ರಮೇಶ್

ರಂಗಭೂಮಿಯ ಅಧ್ಯಯನ,ಪ್ರಾತ್ಯಕ್ಷಿಕೆ,ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ
ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Leave a Reply

Your email address will not be published. Required fields are marked *

× How can I help you?