ಮೈಸೂರು-ಭಾನುವಾರದಂದು ನಟನ ರಂಗಶಾಲೆಯ ಹೊಸ ನಾಟಕ ‘ಶ್ರೀಮನ್ಮಹೀಶೂರ ರತ್ನ ಸಿಂಹಾಸನ’ಪ್ರದರ್ಶನ

ಮೈಸೂರು-ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಡಿಸೆಂಬರ್ 01ರಂದು ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2024-25ನೇ ಸಾಲಿನ ರಂಗಭೂಮಿ ಡಿಫ್ಲೋಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಸಂಸ ವಿರಚಿತ ವಿಗಡ ವಿಕ್ರಮರಾಯ ಮತ್ತು ಮಂತ್ರಶಕ್ತಿ ನಾಟಕಗಳ ಸಂಕಲಿತ ರೂಪ ‘ಶ್ರೀ ಮನ್ಮಹೀಶೂರ ರತ್ನ ಸಿಂಹಾಸನ’ ಎಂಬ ನಾಟಕವು ನಟನ ರಂಗಶಾಲೆಯ ಪ್ರಾಂಶುಪಾಲರೂ, ಯುವ ರಂಗ ನಿರ್ದೇಶಕರೂ ಆದ ಶ್ರೀ ಮೇಘ ಸಮೀರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಜಗತ್ತಿನ ನಾಟಕ ಸಾಹಿತ್ಯಕ್ಕೆ ‘ಸಂಸ’ ನಾಮಾಂಕಿತ ಸಾಮಿ ವೆಂಕಟಾದ್ರಿ ಅಯ್ಯರ್ ಅವರ ಕೊಡುಗೆ ಅಪ್ರತಿಮವಾದದ್ದು. ಕನ್ನಡದಲ್ಲಿ ಐತಿಹಾಸಿಕ ನಾಟಕಗಳನ್ನು, ಅದರಲ್ಲೂ ಎಲ್ಲಾ ಕಾಲಕ್ಕೂ ಸಲ್ಲುವ ರಾಜಕೀಯ ಪ್ರಜ್ಞೆ, ಸಂಕೀರ್ಣ ಕಥಾವಸ್ತುವನ್ನು, ರಾಜತಾಂತ್ರಿಕ ವ್ಯವಸ್ಥೆಯ, ಪ್ರಭುತ್ವದ ಒಳಸುಳಿ, ಜಟಿಲತೆಗಳನ್ನು ಕನ್ನಡದ ವಿಶಿಷ್ಟ ಶೈಲಿಯಲ್ಲಿ ರಚಿಸಿದವರು. ಆದ ಕಾರಣದಿಂದಲೇ ಓದುಗರಿಗೆ, ನಿರ್ದೇಶಕರಿಗೆ, ನಟರಿಗೆ ಸವಾಲು ಎಸಗುವಂತಹವರು. ಕನ್ನಡದಲ್ಲಿ ಅಪರೂಪವೆನಿಸಿದ ನಾಟಕ ಚಕ್ರದ ರೀತಿಯಲ್ಲಿ ನಾಟಕಗಳನ್ನು ಬರೆದವರು ಸಂಸರು.

ಬೆಟ್ಟದ ಅರಸು, ವಿಗಡ ವಿಕ್ರಮರಾಯ, ವಿಜಯ ನಾರಸಿಂಹ ಮತ್ತು ಮಂತ್ರಶಕ್ತಿ.. ಈ ನಾಲ್ಕೂ ನಾಟಕಗಳು ರಣಧೀರ ಕಂಠೀರವ ನರಸರಾಜ ಒಡೆಯರ ಬದುಕು, ವ್ಯಕ್ತಿತ್ವ ಮತ್ತು ಆಡಳಿತದ ಚರಿತ್ರೆಯ ಆಧಾರದ ಮೇಲೆ ಸರಣಿಯ ರೀತಿ ರಚಿಸಿದ ನಾಟಕಗಳು. ‘ಪ್ರಭುಶಕ್ತಿ’, ‘ಉತ್ಸಾಹಶಕ್ತಿ’, ‘ಮಂತ್ರಶಕ್ತಿ’ ಹೇಗೆ ಪ್ರಭುತ್ವ, ಅಧಿಕಾರ, ರಾಜಕಾರಣದಲ್ಲಿ ಕೆಲಸಮಾಡುತ್ತದೆ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ನಾಟಕಗಳು ಧ್ವನಿಸುತ್ತವೆ. ಇವುಗಳಲ್ಲಿ ‘ವಿಗಡ ವಿಕ್ರಮರಾಯ’ ಮತ್ತು ‘ಮಂತ್ರಶಕ್ತಿ’ ನಾಟಕಗಳನ್ನು ಸಂಕಲಿಸಿ ಮಾಡಿರುವ ರಂಗ ಪ್ರಯೋಗವೇ ‘ರತ್ನ ಸಿಂಹಾಸನ’

ರ0ಗಾಸಕ್ತರು ಮಾಹಿತಿಗಾಗಿ 7259537777,9480468327,9845595505 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.

ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Leave a Reply

Your email address will not be published. Required fields are marked *

× How can I help you?